ಯಾದಗಿರಿ: ಯಾದಗಿರಿಯಲ್ಲಿ 40 ವರ್ಷಗಳ ಹಳೆಯ ಭೂಸ್ವಾಧೀನ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭೆ ಪರಿಹಾರ ಹಣ ಪಾವತಿಸದ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಲಯದ ಆದೇಶದಂತೆ ಕಚೇರಿ ಸಾಮಗ್ರಿಗಳನ್ನು ಮಂಗಳವಾರ ಜಪ್ತಿ ಮಾಡಲಾಗಿದೆ.
ನಗರದ ಸರಸ್ವತಿ ನಾರಾಯಣರಾವ್ ಅವರ ಜಾಗವನ್ನು ಸುಮಾರು 40 ವರ್ಷಗಳ ಹಿಂದೆ ನಗರಸಭೆ ಸ್ವಾಧೀನಪಡಿಸಿಕೊಂಡಿತ್ತು. ಭಾಗಶಃ ಮಾತ್ರ ಪರಿಹಾರ ನೀಡಲು ಮುಂದಾದಾಗ ಸರಸ್ವತಿ ಅವರು ಪೂರ್ಣ ಪರಿಹಾರಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿಯನ್ನು ಪುರಸ್ಕರಿಸಿದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ, ಸರಸ್ವತಿ ಅವರ ಕುಟುಂಬಕ್ಕೆ ₹2.12 ಕೋಟಿ ಪರಿಹಾರ ನೀಡುವಂತೆ ನಗರಸಭೆಗೆ ಆದೇಶಿಸಿತ್ತು. ಆದೇಶ ಪಾಲಿಸದಿದ್ದರೆ ಕಚೇರಿ ಸಾಮಗ್ರಿ ಜಪ್ತಿ ಮಾಡುವಂತೆ ವಾರಂಟ್ ಕೂಡ ನೀಡಿತ್ತು.
ಸೋಮವಾರ ನಗರಸಭೆ ಆವರಣದಲ್ಲಿ ಅರ್ಜಿದಾರರು, ಕೋರ್ಟ್ ಸಿಬ್ಬಂದಿ ಮತ್ತು ಆಯುಕ್ತರ ನಡುವೆ ಮಾತುಕತೆ ನಡೆಯಿತು. ಆಯುಕ್ತ ಉಮೇಶ್ ಚವ್ಹಾಣ್ ಅವರು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಹಂತ-ಹಂತವಾಗಿ ಹಣ ನೀಡುವುದಾಗಿ ಮನವಿ ಮಾಡಿದರು. ಕಂಪ್ಯೂಟರ್‌ಗಳಲ್ಲಿ SIR ಕೆಲಸದ ದಾಖಲೆಗಳಿವೆ ಎಂದು ಕಾಲಾವಕಾಶವೂ ಕೇಳಿದರು. ಆದರೆ ಮಾತುಕತೆ ಮುರಿದುಬಿದ್ದಿತು.
ಮಂಗಳವಾರ ಬೆಳಿಗ್ಗೆ ಕೋರ್ಟ್ ಸಿಬ್ಬಂದಿ ಲಾರಿ ಸಮೇತ ಆಗಮಿಸಿ ಕಂಪ್ಯೂಟರ್, ಸಿಸಿಟಿವಿ ಕ್ಯಾಮೆರಾ, ಟೇಬಲ್, ಕುರ್ಚಿ ಸೇರಿದಂತೆ ಸಾಮಗ್ರಿಗಳನ್ನು ಜಪ್ತಿ ಮಾಡಿಕೊಂಡು ಹೋದರು.
ಉಮೇಶ್ ಚವ್ಹಾಣ್, ಪೌರಾಯುಕ್ತ, ಯಾದಗಿರಿ ನಗರಸಭೆ
ಸ್ಥಳ ಸ್ವಾಧೀನಪಡಿಸಿಕೊಂಡ ಹಿನ್ನೆಲೆಯಲ್ಲಿ 2.12 ಕೋಟಿ ಪರಿಹಾರ ನೀಡಬೇಕಿತ್ತು. ಆದರೆ ಅಷ್ಟೊಂದು ಹಣ ನಗರಸಭೆ ಬಳಿ ಇಲ್ಲ. 20 ಲಕ್ಷ ನೀಡಿ ನಂತರ 5 ಲಕ್ಷದಂತೆ ನೀಡುವುದಾಗಿ ಮನವಿ ಮಾಡಿದ್ದೆವು. ಅರ್ಜಿದಾರರು ಒಪ್ಪದ ಕಾರಣ ನ್ಯಾಯಾಲಯದ ಆದೇಶ ಪಾಲಿಸಿ ಸಾಮಾನುಗಳನ್ನು ಜಪ್ತಿ ಮಾಡಲಾಗಿದೆ ಎಂದು ಹೇಳಿದರು.
PublicNext
29/07/2026 09:45 am