ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸ್ವಾಭಿಮಾನಿ ನಾಯಕ ಶ್ರೀನಿವಾಸ್ ಪ್ರಸಾದ್ ಜನ್ಮದಿನ; ಶಾಲಾ ಮಕ್ಕಳಿಗೆ ಸಿಹಿ ಹಂಚಿ ಅರ್ಥಪೂರ್ಣ ಆಚರಣೆ

ನಂಜನಗೂಡು ತಾಲೂಕಿನ ಬದನವಾಳು ಗ್ರಾಮದಲ್ಲಿ ಮಾಜಿ ಸಂಸದ ದಿವಂಗತ ವಿ. ಶ್ರೀನಿವಾಸ್ ಪ್ರಸಾದ್ ಅವರ 79ನೇ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಬದನವಾಳು ಗ್ರಾಮದ ಶಾಲಾ ಮಕ್ಕಳಿಗೆ ಸಿಹಿ ಹಂಚುವ ಮೂಲಕ ಅವರ ಹುಟ್ಟುಹಬ್ಬವನ್ನು ಸ್ಮರಿಸಲಾಯಿತು. ಇದೇ ವೇಳೆ ದಿವಂಗತ ಶ್ರೀನಿವಾಸ್ ಪ್ರಸಾದ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು.

ನಂತರ ಮಾತನಾಡಿದ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಬಿ.ಎಸ್. ರಾಮು ಅವರು, "ವಿ. ಶ್ರೀನಿವಾಸ್ ಪ್ರಸಾದ್ ಅವರು 'ಸ್ವಾಭಿಮಾನಿ ನಾಯಕ' ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು ಹಾಗೂ ಇಡೀ ಕರ್ನಾಟಕ ರಾಜ್ಯದಲ್ಲೇ ಅಪಾರ ಜನಮನ್ನಣೆ ಪಡೆದಿದ್ದರು. ಅವರು 6 ಬಾರಿ ಸಂಸದರಾಗಿ, 2 ಬಾರಿ ಶಾಸಕರಾಗಿ ಚಾಮರಾಜನಗರ ಮತ್ತು ಮೈಸೂರು ಭಾಗಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ," ಎಂದು ನೆನಪಿಸಿಕೊಂಡರು.

ಮುಂದುವರಿದು ಮಾತನಾಡಿದ ಅವರು, "ಶ್ರೀನಿವಾಸ್ ಪ್ರಸಾದ್ ಅವರು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚು ಆದ್ಯತೆ ನೀಡಿದ್ದರು. ದೀನ-ದಲಿತರ ಪರವಾಗಿ ನಿರಂತರವಾಗಿ ಧ್ವನಿ ಎತ್ತುತ್ತಿದ್ದ ಅವರು, ಸುಮಾರು 50 ವರ್ಷಗಳ ಸುದೀರ್ಘ ರಾಜಕೀಯ ಇತಿಹಾಸ ಹೊಂದಿದ್ದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಪ್ರಮುಖ ಸಚಿವರಾಗಿ ಮಹತ್ವದ ಸೇವೆ ಸಲ್ಲಿಸಿದ್ದ ಇಂತಹ ನಾಯಕರು ನಮಗೆ ಮತ್ತೆ ಸಿಗುವುದಿಲ್ಲ," ಎಂದು ಭಾವುಕರಾಗಿ ಸ್ಮರಿಸಿದರು.

ಈ ಸಂದರ್ಭದಲ್ಲಿ ಉದ್ಯಮಿ ಸೋಮಣ್ಣ, ಗ್ರಾಪಂ ಮಾಜಿ ಸದಸ್ಯರಾದ ಎಂ. ಮಹದೇವ್, ಶಿವರಾಮು, ಗ್ರಾಮದ ಯಜಮಾನರಾದ ಗುರುಸ್ವಾಮಿ, ಬಿಜೆಪಿ ಯುವ ಮುಖಂಡ ಮಂಟೇಲಿಂಗು, ಸಿದ್ದರಾಜು, ಜನಾರ್ದನ್, ವಿಜಯೇಂದ್ರ, ಮೂರ್ತಿ ಸೇರಿದಂತೆ ಗ್ರಾಮದ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

06/08/2026 03:47 pm

Cinque Terre

340

Cinque Terre

0

ಸಂಬಂಧಿತ ಸುದ್ದಿ