ಮೈಸೂರು : ಸಚಿವ ಸಂಪುಟ ವಿಚಾರದಲ್ಲಿ ನಮ್ಮ ತಂದೆಗೆ ಯಾವುದೇ ಅಸಮಾಧಾನವಿಲ್ಲ ಎಂದು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ನಮ್ಮ ತಂದೆ 14 ಜನರಿಗೆ ಸಚಿವ ಸ್ಥಾನಕ್ಕಾಗಿ ಶಿಫಾರಸು ಮಾಡಿದ್ದರು. ಅದರಲ್ಲಿ ಬಹುತೇಕರಿಗೆ ಸಚಿವ ಸ್ಥಾನ ಸಿಕ್ಕಿದೆ. ಸಿದ್ದರಾಮಯ್ಯ ಅವರು ನೀಡಿದ ಎರಡು ಹಂತದ ಪಟ್ಟಿಯಲ್ಲೂ ಹೆಚ್.ಸಿ. ಮಹದೇವಪ್ಪ ಅವರ ಹೆಸರಿತ್ತು. ಮಹದೇವಪ್ಪ ಅವರಿಗೆ ಸಚಿವ ಸ್ಥಾನ ಕೊಡಿ ಎಂದು ನಮ್ಮ ತಂದೆ ಕೇಳಿದ್ದರು, ಆದರೆ ಹೈಕಮಾಂಡ್ ಅದಕ್ಕೆ ಒಪ್ಪಲಿಲ್ಲ. ಜಮೀರ್ ಅಹಮದ್ ಅವರಿಗೂ ನಮ್ಮ ತಂದೆ ಸಚಿವ ಸ್ಥಾನ ಕೇಳಿರಲಿಲ್ಲ," ಎಂದರು.
"ಗಾಯತ್ರಿ ಅವರಿಗೆ ಸಚಿವ ಸ್ಥಾನ ಸಿಗದ ವಿಚಾರದಲ್ಲಾಗಲಿ ಅಥವಾ ತನ್ವೀರ್ ಸೇಠ್‌ಗೆ ಸಚಿವ ಸ್ಥಾನ ತಪ್ಪಿದ ಹಿನ್ನೆಲೆಯಲ್ಲಾಗಲಿ ನಮ್ಮ ತಂದೆಯವರ ಪಾತ್ರವಿಲ್ಲ. ಈ ಸಚಿವ ಸಂಪುಟದ ಬಗ್ಗೆ ಅವರಿಗೆ ಯಾವುದೇ ಅಸಮಾಧಾನವಿಲ್ಲ. ಆಗಸ್ಟ್ 3 ನಮ್ಮ ತಂದೆಯ ಹುಟ್ಟುಹಬ್ಬ, ಹೀಗಾಗಿ ಅವರು ಪ್ರಮಾಣವಚನ ಕಾರ್ಯಕ್ರಮಕ್ಕೆ ಬರಲಿಲ್ಲ. ಕೆಲವೊಮ್ಮೆ ಕೆಲವು ಸಮುದಾಯಗಳಿಗೆ ಅವಕಾಶ ತಪ್ಪುತ್ತದೆ, ಅದನ್ನು ಬೇರೆ ರೀತಿಯಲ್ಲಿ ಪಕ್ಷ ಸರಿದೂಗಿಸುತ್ತದೆ," ಎಂದು ವಿವರಿಸಿದರು.
"ನಮ್ಮ ತಂದೆ ಅರ್ಧಕ್ಕೆ ಸಿಎಂ ಸ್ಥಾನದಿಂದ ಕೆಳಗಿಳಿದ ಕಾರಣ ನನಗೆ ಸಚಿವ ಸ್ಥಾನ ನೀಡಲಾಗಿದೆ. ನನಗೆ ಸಚಿವ ಸ್ಥಾನ ನೀಡದೇ ಇದ್ದಿದ್ದರೆ ಸಹಜವಾಗಿ ನಮ್ಮ ಸಮುದಾಯಕ್ಕೆ ಬೇಸರವಾಗುತ್ತಿತ್ತು. ನನಗೆ ಸಚಿವ ಸ್ಥಾನ ನೀಡಿದ್ದರಲ್ಲಿ ಯಾವುದೇ ತಪ್ಪಿಲ್ಲ. ನಾನು ಖುದ್ದು ಮಹದೇವಪ್ಪ ಹಾಗೂ ತನ್ವೀರ್ ಸೇಠ್ ಅವರನ್ನು ಭೇಟಿ ಮಾಡುತ್ತೇನೆ. ಅವರೆಲ್ಲ ನಮ್ಮ ಪಕ್ಷದ ಹಿರಿಯ ನಾಯಕರು, ಅವರೊಂದಿಗೆ ಮಾತನಾಡುತ್ತೇನೆ," ಎಂದು ಯತೀಂದ್ರ ತಿಳಿಸಿದರು.
PublicNext
06/08/2026 07:45 pm
LOADING...