ದಕ್ಷಿಣ ಕನ್ನಡದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಳೆದ ಕೆಲವು ಸಮಯದಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಉಮರ್ ಫಾರೂಕ್ ಎಂ.ಆರ್. ಎಂಬಾತನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಕೇರಳದ ಕೊಚ್ಚಿಯಲ್ಲಿ ಬಂಧಿಸಿದೆ. ವಿಶ್ವಾಸಾರ್ಹ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಎನ್‌ಐಎ ನಡೆಸಿದ ಕಾರ್ಯಾಚರಣೆಯಲ್ಲಿ ಈತನನ್ನು ಬಂಧಿಸಲಾಗಿದ್ದು, ಇದರೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.
ಆರೋಪಿ ಸುಳಿವು ನೀಡಿದವರಿಗೆ ₹2 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಅಲ್ಲದೆ, ಇಂಟರ್‌ಪೋಲ್ ಮೂಲಕ ‘ರೆಡ್ ಕಾರ್ನರ್ ನೋಟಿಸ್’ ಹಾಗೂ ಜಾಮೀನು ರಹಿತ ಬಂಧನ ವಾರಂಟ್ ಜಾರಿಯಾಗಿತ್ತು. ನಿಷೇಧಿತ ಪಿಎಫ್‌ಐ (PFI) ಸಂಘಟನೆಯ ಸಂಚು ಸಭೆಯಲ್ಲಿ ಭಾಗಿ, ಪ್ರವೀಣ್ ನೆಟ್ಟಾರು ಚಲನವಲನಗಳ ಮೇಲೆ ಕಣ್ಣಿಡಲು ಸಹ-ಆರೋಪಿಗೆ ತನ್ನ ಬೈಕ್ ನೀಡಿದ್ದ ಹಾಗೂ ಪ್ರಕರಣದ ಪ್ರಮುಖ ಸಾಕ್ಷಿಯೊಬ್ಬರ ಮೇಲೆ ಕೊಲೆ ಯತ್ನ ನಡೆಸಿದ್ದ ಆರೋಪ ಈತನ ಮೇಲಿದೆ.
2022ರ ಜುಲೈ 26ರಂದು ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಅವರನ್ನು ದಾರುಣವಾಗಿ ಹತ್ಯೆ ಮಾಡಲಾಗಿತ್ತು. ಸಮಾಜದಲ್ಲಿ ಭೀತಿ ಹುಟ್ಟಿಸುವ ಉದ್ದೇಶದಿಂದ ಪಿಎಫ್‌ಐ ನಡೆಸಿದ್ದ ಟಾರ್ಗೆಟ್ ಕಿಲ್ಲಿಂಗ್ ಇದಾಗಿದೆ ಎಂದು ಎನ್‌ಐಎ ತಿಳಿಸಿದ್ದು, ತಲೆಮರೆಸಿಕೊಂಡಿರುವ ಉಳಿದ ಇಬ್ಬರು ಆರೋಪಿಗಳಿಗಾಗಿ ಶೋಧ ಮುಂದುವರಿಸಿದೆ.
PublicNext
06/08/2026 04:47 pm
LOADING...