ಉಳ್ಳಾಲ : ಸೋಮೇಶ್ವರ ಸಮೀಪದ ಪಿಲಾರು ಸರ್ಕಾರಿ ಶಾಲೆ ಸಮೀಪದ ಮನೆಯಲ್ಲಿ 35 ವರ್ಷದ ಯುವಕನೊಬ್ಬ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ, ನಿತಿನ್ ಕುಮಾರ್ ಅಲಿಯಾಸ್ ನೀತು (35) ಮೃತಪಟ್ಟ ಯುವಕ. ಮೃತ ಯುವಕನ ಬಳಿ ಪತ್ತೆಯಾದ ಡೆತ್‌ನೋಟ್‌ನಲ್ಲಿ ಮೂವರ ಹೆಸರನ್ನು ಉಲ್ಲೇಖಿಸಿರುವ ಹಿನ್ನೆಲೆಯಲ್ಲಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ.
ಮೂಲತಃ ಕೋಟೆಕಾರು ಕೊಂಡಾಣ ಮಿತ್ರನಗರ ನಿವಾಸಿಯಾಗಿರುವ ನಿತಿನ್ ಕುಮಾರ್, ಕಳೆದ ಮೂರು ವರ್ಷಗಳಿಂದ ಪಿಲಾರಿನಲ್ಲಿರುವ ತನ್ನ ಭಾವ ಪ್ರಶಾಂತ್ ಪಕ್ಕಳ ಅವರ ಮನೆಯಲ್ಲಿ ವಾಸವಾಗಿದ್ದರು. ತೊಕ್ಕೊಟ್ಟು ಕಾಪಿಕಾಡಿನ ಕ್ಯಾಟರಿಂಗ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ನಿತಿನ್ ಕಳೆದ ಐದು ವರ್ಷಗಳಿಂದ ಕಾಲಿನ ವೆರಿಕೋಸ್ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.
ಮೂರು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ನಿತಿನ್ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದರೆ. ಮಂಗಳವಾರ ರಾತ್ರಿ ಊಟ ಮಾಡಿ ತಮ್ಮ ಕೋಣೆಗೆ ತೆರಳಿದ ಅವರು, ಬುಧವಾರ ಬೆಳಿಗ್ಗೆ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಘಟನಾ ಸ್ಥಳದಲ್ಲಿ ನಿತಿನ್ ಧರಿಸಿದ್ದ ಪ್ಯಾಂಟ್‌ನ ಜೇಬಿನಲ್ಲಿ ಡೆತ್‌ನೋಟ್ ಪತ್ತೆಯಾಗಿದ್ದು, ಅದರಲ್ಲಿ “ನನ್ನ ಸಾವಿಗೆ ಚರಣ್, ಪುಟ್ಟ ಹಾಗೂ ಕಾರ್ತಿಕ್ ಕಾರಣ” ಎಂದು ಉಲ್ಲೇಖಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಮೂವರ ಕಿರುಕುಳ ಹಾಗೂ ಪ್ರಚೋದನೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಚೀಟಿಯಲ್ಲಿ ಆರೋಪಿಸಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
PublicNext
06/08/2026 02:04 pm