ಬೆಂಗಳೂರು: ಕಲಬುರಗಿ ಮೂಲದ ಗೃಹ ಸಚಿವರೇ, ನಿಮ್ಮದೇ ಇಲಾಖೆಯ ಸಿಬ್ಬಂದಿಯಿಂದ ನಿಮ್ಮದೇ ಜಿಲ್ಲೆಯ ಮಹಿಳೆಯೊಬ್ಬರಿಗೆ ಅನ್ಯಾಯವಾಗಿದ್ದು, ಸಂಕಷ್ಟದಲ್ಲಿರುವ ಕುಟುಂಬದ ಕಣ್ಣೀರಿನ ಕಥೆ ಇದು.
ಸಿಎಆರ್ ವೆಸ್ಟ್‌ನ ಹೆಡ್ ಕಾನ್‌ಸ್ಟೇಬಲ್ ಈರಣ್ಣ ಬಳ್ಳುಂಡಗಿ ಎಂಬಾತ, 13 ವರ್ಷಗಳ ಹಿಂದೆ ಮದುವೆಯಾಗಿದ್ದ ಪತ್ನಿ ಅಂಶುಬಾಯಿ ಹಾಗೂ ಇಬ್ಬರು ಮಕ್ಕಳನ್ನು ಬಿಟ್ಟು, ಪೊಲೀಸ್ ಸೇವಾ ನಿಯಮಗಳನ್ನು ಗಾಳಿಗೆ ತೂರಿ ಎರಡನೇ ಮದುವೆಯಾಗಿದ್ದಾನೆ. ಮೊದಲ ಪತ್ನಿಗೆ ವಿಚ್ಛೇದನ ನೀಡದೆ, ಕೋರ್ಟ್ ಆದೇಶವಿದ್ದರೂ ಜೀವನಾಂಶ ಕೊಡುವುದನ್ನು ನಿಲ್ಲಿಸಿದ್ದಾನೆ.
ಪುಲಕೇಶಿನಗರದಲ್ಲಿರುವ ಹಳೆಯ, ಕುಸಿಯುವ ಹಂತದಲ್ಲಿರುವ ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ಅಂಶುಬಾಯಿ ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಕಟ್ಟಡ ಅಪಾಯಕಾರಿಯಾದ್ದರಿಂದ ಇಲಾಖೆಯು ಇತರ ಎಲ್ಲ ಕುಟುಂಬಗಳನ್ನು ತೆರವುಗೊಳಿಸಿ ಹೊಸ ಕ್ವಾರ್ಟರ್ಸ್ ನೀಡಿದೆ. ಆದರೆ, ಹೊಸ ಮನೆಗೆ ಪತಿ ಈರಣ್ಣ ಸಹಿ ಹಾಕದ ಕಾರಣ ಈ ಕುಟುಂಬಕ್ಕೆ ವಸತಿ ಸಿಕ್ಕಿಲ್ಲ. ಖಾಲಿ ಇರುವ 36 ಮನೆಗಳ ಬೃಹತ್ ಕಟ್ಟಡದಲ್ಲಿ ಒಂಟಿಯಾಗಿರುವ ಈ ಕುಟುಂಬಕ್ಕೆ ಕುಡುಕರು ಮತ್ತು ಪುಂಡರ ಕಾಟ ಹೆಚ್ಚಾಗಿದ್ದು, ಕಲ್ಲು-ಬಾಟಲಿ ಎಸೆಯುವ ಭೀಕರ ವಾತಾವರಣವಿದೆ.
"ನಮಗೆ ಇಲಾಖೆಯಿಂದ ಸೂಕ್ತ ನ್ಯಾಯ ಕೊಡಿಸಿ, ಇಲ್ಲವೇ ವಿಷ ಕುಡಿದು ಸಾಯಲು ಅನುಮತಿ ನೀಡಿ" ಎಂದು ಕಣ್ಣೀರಿಡುತ್ತಾ ವಿಡಿಯೋ ಮಾಡಿ ನೆರವಿಗೆ ಮನವಿ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪುಲಕೇಶಿನಗರ ಠಾಣೆ ಹಾಗೂ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದ್ದು, ಆಯೋಗವು ಇಲಾಖೆಯಿಂದ ವರದಿ ಕೇಳಿದೆ. ಕೋರ್ಟ್ ನೋಟಿಸ್ ತಲುಪಿದ್ದರೂ ಹಿರಿಯ ಅಧಿಕಾರಿಗಳು ಮೌನ ವಹಿಸಿದ್ದು, ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹ ಕೇಳಿಬಂದಿದೆ.
PublicNext
06/08/2026 04:53 pm