ಬೆಂಗಳೂರು : ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡುವುದು ಹಾಗೂ ತ್ಯಾಜ್ಯಮುಕ್ತ ನಗರ ಪಾಲಿಕೆಯನ್ನಾಗಿಸಿ, ಸುಂದರ ನಗರವನ್ನಾಗಿ ರೂಪಿಸಲು ಹಾಗೂ ಸ್ವಚ್ಛ ಸರ್ವೇಕ್ಷಣ 2025-26ರ ಶ್ರೇಯಾಂಕ ಪಟ್ಟಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ಉತ್ತಮ ಸ್ಥಾನ ಗಳಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಬೆಂಗಳೂರು ಕೇಂದ್ರ ನಗರ ಪಾಲಿಕೆ ವತಿಯಿಂದ ಹಮ್ಮಿಕೊಂಡಿರುವ 3ನೇ ಹಂತದ ವಿಶೇಷ ಸ್ವಚ್ಛತಾ ಅಭಿಯಾನದ ಕಾರ್ಯಕ್ರಮಕ್ಕೆ ಈಗಾಗಲೇ ರೂಪಿಸಲಾಗಿರುವ ಸ್ವಚ್ಛತಾ ಕಾರ್ಯ ವೇಳಾಪಟ್ಟಿಯಂತೆ (ಆ್ಯಕ್ಷನ್ ಪ್ಲಾನ್‌ನಂತೆ) ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಆರು ವಿಭಾಗಗಳಲ್ಲಿನ ದೇವಾಲಯಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿಶೇಷ ಸ್ವಚ್ಛತಾ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಕೈಗೊಳ್ಳಲಾಗಿದೆ ಎಂದು ಪಾಲಿಕೆಯ ಆಯುಕ್ತರಾದ ಜಗದೀಶ್ ಜಿ. ಅವರು ತಿಳಿಸಿದ್ದಾರೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ 6 ವಿಭಾಗಗಳಾದ ಶಾಂತಿನಗರ, ಸಿ.ವಿ.ರಾಮನ್ ನಗರ, ಶಿವಾಜಿನಗರ, ಗಾಂಧಿನಗರ, ಚಾಮರಾಜಪೇಟೆ ಹಾಗೂ ಚಿಕ್ಕಪೇಟೆ ವಿಭಾಗಗಳಲ್ಲಿರುವ ದೇವಾಲಯಗಳ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛ, ಶುಚಿತ್ವಯುತ ಹಾಗೂ ಸಾರ್ವಜನಿಕರ ಬಳಕೆಗೆ ಮತ್ತಷ್ಟು ಅನುಕೂಲಕರವಾಗಿಸುವ ಉದ್ದೇಶದಿಂದ ಪಾಲಿಕೆಯ ಆರು ವಿಭಾಗಗಳ ವ್ಯಾಪ್ತಿಯಲ್ಲಿನ ಒಟ್ಟು 45 ದೇವಾಲಯಗಳ ಸುತ್ತಮುತ್ತಲಿನ ಪ್ರದೇಶಗಳನ್ನು ಸಮಗ್ರವಾಗಿ ಸ್ವಚ್ಛಗೊಳಿಸಲಾಗಿದ್ದು, ಸುಮಾರು 1,182 ಕೆ.ಜಿ. ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ.
ಈ ವಿಶೇಷ ಸ್ವಚ್ಛತಾ ಕಾರ್ಯಾಚರಣೆಯಲ್ಲಿ ಸುಮಾರು 218 ಪೌರಕಾರ್ಮಿಕರು (PKs) ಹಾಗೂ 89 ಸ್ವಚ್ಛತಾ ಸಿಬ್ಬಂದಿಗಳು ಸಕ್ರಿಯವಾಗಿ ಭಾಗವಹಿಸಿ ಸ್ವಚ್ಛತಾ ಕಾರ್ಯವನ್ನು ಯಶಸ್ವಿಗೊಳಿಸಿದ್ದಾರೆ. ನಗರದ ಧಾರ್ಮಿಕ ಸ್ಥಳಗಳ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿ ಕಾಪಾಡುವುದು ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಪ್ರಮುಖ ಆದ್ಯತೆಯಾಗಿದ್ದು, ಸ್ವಚ್ಛ ಸರ್ವೇಕ್ಷಣ 2025-26ರಲ್ಲಿ ಉತ್ತಮ ಸ್ಥಾನ ಪಡೆಯುವ ನಿಟ್ಟಿನಲ್ಲಿ ಇಂತಹ ವಿಶೇಷ ಸ್ವಚ್ಛತಾ ಕಾರ್ಯಾಚರಣೆಗಳು ನಿರಂತರವಾಗಿ ಮುಂದುವರಿಯಲಿವೆ ಎಂದು ಆಯುಕ್ತರಾದ ಜಗದೀಶ್ ಜಿ. ಅವರು ತಿಳಿಸಿದ್ದಾರೆ.
PublicNext
06/08/2026 08:18 pm