ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಇಂಧನ ಸಚಿವ ಕೆ.ಜೆ. ಜಾರ್ಜ್ ಪ್ರವಾಸ; ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಬರ ಪರಿಶೀಲನೆ

ಚಿಕ್ಕಮಗಳೂರು : ರಾಜ್ಯದ ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರು ಆಗಸ್ಟ್ 7ರಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ಹಾಗೂ ಸಭೆಗಳಲ್ಲಿ ಭಾಗವಹಿಸಲು ಸುದೀರ್ಘ ಪ್ರವಾಸ ಕೈಗೊಳ್ಳಲಿದ್ದಾರೆ.

ಬೆಳಿಗ್ಗೆ 9.30ಕ್ಕೆ ಬೆಂಗಳೂರಿನ ಹೆಚ್.ಎ.ಎಲ್. ವಿಮಾನ ನಿಲ್ದಾಣದಿಂದ ಹೆಲಿಕ್ಯಾಪ್ಟರ್ ಮೂಲಕ ಹೊರಡಲಿರುವ ಸಚಿವರು, 10.15ಕ್ಕೆ ತರೀಕೆರೆ ತಾಲೂಕಿನ ವಿಜ್ಞಾನ್ ಇಂಡಸ್ಟ್ರೀಸ್ ಲಿಮಿಟೆಡ್ ಮೈದಾನದ ಹೆಲಿಪ್ಯಾಡ್ ತಲುಪಲಿದ್ದಾರೆ. ದೋರನಾಳಿನಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಬೆಳಿಗ್ಗೆ 11 ಗಂಟೆಗೆ ತರೀಕೆರೆ ಪುರಸಭೆಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಬಳಿಕ ಅಜ್ಜಂಪುರಕ್ಕೆ ತೆರಳಿ ಅಮೃತ್ ಮಹಲ್ ತಳಿ ಸಂವರ್ಧನಾ ಕೇಂದ್ರವನ್ನು ವೀಕ್ಷಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಶ್ರೀ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಭದ್ರಾ ಕಾಡಾ ವತಿಯಿಂದ ಆಯೋಜಿಸಿರುವ ನೀರು ಬಳಕೆದಾರರ ಸಹಕಾರ ಸಂಘಗಳಿಗೆ ಕೃಷಿ ಯಂತ್ರೋಪಕರಣಗಳ ವಿತರಣೆ ಹಾಗೂ ಕಾರ್ಯಾಗಾರವನ್ನು ಉದ್ಘಾಟಿಸಲಿದ್ದಾರೆ.

ನಂತರ ಶ್ರೀರಾಂಪುರ, ಬೇಗೂರು ಗೇಟ್ ತಾಂಡ್ಯ ಪ್ರದೇಶಗಳಲ್ಲಿ ಬರ ಪರಿಸ್ಥಿತಿ, ಬೆಳೆಗಳ ಸ್ಥಿತಿ ಹಾಗೂ ಮುದಿಗೆರೆ ಕೆರೆಯನ್ನು ಪರಿಶೀಲಿಸಲಿದ್ದಾರೆ. ಮಧ್ಯಾಹ್ನ 1.30ಕ್ಕೆ ಕಡೂರು ತಾಲೂಕಿನ ಹಡಗಲು, ಕಲ್ಕೆರೆ, ಗೊಲ್ಲರಹಟ್ಟಿ, ದೊಣ್ಣೆಕೋರನಹಳ್ಳಿ, ಪಿ. ಕೋಡಿಹಳ್ಳಿ ಮತ್ತು ಅಣ್ಣೆಗೆರೆ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ಹಾಗೂ ಬರ ಪರಿಸ್ಥಿತಿಯನ್ನು ವೀಕ್ಷಿಸಲಿದ್ದಾರೆ.

ಮಧ್ಯಾಹ್ನ 3 ಗಂಟೆಗೆ ಕಡೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಬರ ಪರಿಸ್ಥಿತಿ, ಬೆಳೆ ಹಾಗೂ ಕೆರೆಗಳ ಸ್ಥಿತಿ ಮತ್ತು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಸಮಗ್ರ ಪರಿಶೀಲನಾ ಸಭೆ ನಡೆಸಲಿದ್ದಾರೆ. ಸಭೆಯ ನಂತರ ಸಂಜೆ 4.30ಕ್ಕೆ ಕಡೂರು ಪೊಲೀಸ್ ಟ್ರೈನಿಂಗ್ ಸ್ಕೂಲ್ ಹೆಲಿಪ್ಯಾಡ್‌ನಿಂದ ಹೆಲಿಕ್ಯಾಪ್ಟರ್ ಮೂಲಕ ಸಚಿವರು ಬೆಂಗಳೂರಿಗೆ ವಾಪಸಾಗಲಿದ್ದಾರೆ.

Edited By : PublicNext Desk
PublicNext

PublicNext

06/08/2026 06:02 pm

Cinque Terre

3.48 K

Cinque Terre

0

ಸಂಬಂಧಿತ ಸುದ್ದಿ