ನಂಜನಗೂಡು: ನಂಜನಗೂಡು ತಾಲ್ಲೂಕಿನ ಮರಳೂರು ಮತ್ತು ಗೊದ್ದನಪುರ ಗ್ರಾಮಗಳಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಬಾರ್ ಮುಚ್ಚುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರು ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ವಿದ್ಯಾಸಾಗರ್ ಮತ್ತು ಜಿಲ್ಲಾಧ್ಯಕ್ಷ ಸತೀಶ್ ರಾವ್ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು. ಮರಳೂರು ಮತ್ತು ಗೊದ್ದನಪುರ ಗ್ರಾಮಗಳಲ್ಲಿ ಬಾರ್ ತೆರೆದು 3 ವರ್ಷವಾಗಿದೆ. ಇದರ ಜೊತೆಗೆ ಗ್ರಾಮಗಳ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ ಎಂದು ದೂರಿದರು. ಇದರಿಂದ ಗ್ರಾಮಗಳಲ್ಲಿ ಜನರು ಕುಡಿದು ಬಲಿಯಾಗುತ್ತಿದ್ದಾರೆ. ಯುವಕರು ಹೆಚ್ಚಾಗಿ ಕುಡಿತಕ್ಕೆ ಒಳಗಾಗುತ್ತಿದ್ದಾರೆ. ಅವರ ಕುಟುಂಬಗಳು ಬೀದಿಗೆ ಬೀಳುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೂ ತೊಂದರೆ ಆಗುತ್ತಿದೆ. ಗ್ರಾಮದ ವಾತಾವರಣ ಹಾಳಾಗಿದೆ ಎಂದು ಅವರು ಹೇಳಿದರು.
ಕೂಡಲೇ ವೈನ್ ಸ್ಟೋರ್ ಮತ್ತು ಬಾರ್ ಮುಚ್ಚಬೇಕು ಎಂದು ಪಟ್ಟು ಹಿಡಿದರು. ಇಲ್ಲದಿದ್ದರೆ ಇನ್ನಷ್ಟು ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಮರಳೂರು ಮತ್ತು ಗೊದ್ದನಪುರದ ಬಾರ್‌ಗಳನ್ನು ತಕ್ಷಣ ಮುಚ್ಚಬೇಕು. ಗ್ರಾಮಗಳ ಅಂಗಡಿಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ನಿಷೇಧಿಸಬೇಕು .ಯುವಕರನ್ನು ಮತ್ತು ಕುಟುಂಬಗಳನ್ನು ರಕ್ಷಿಸಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯ ಪದಾಧಿಕಾರಿಗಳು, ಗ್ರಾಮಸ್ಥರು, ಮಹಿಳೆಯರು ಹಾಗೂ ಯುವಕರು ಭಾಗವಹಿಸಿದ್ದರು.
PublicNext
06/08/2026 08:39 pm
LOADING...