ಉಡುಪಿ : ಉಡುಪಿಯಲ್ಲಿ ಈ ವರ್ಷವೂ ಡೆಂಗ್ಯೂ, ಮಲೇರಿಯಾ ಪ್ರಕರಣಗಳು ಹೆಚ್ಚುತ್ತಿವೆ. ಆದರೆ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಆಸುಪಾಸಿನಲ್ಲೇ ಶುಚಿತ್ವದ ಕೊರತೆ ಎದ್ದು ಕಾಣುತ್ತಿದ್ದು ರೋಗಕ್ಕೆ ತನ್ನದೇ ಕೊಡುಗೆ ನೀಡುತ್ತಿದೆ. ನಗರದ ಹಳೆ ಸರ್ಕಾರಿ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ ಇದ್ದ ನಿವೇಶನದಲ್ಲಿ ಗಿಡಗಂಟಿಗಳು ಬೆಳೆದು ದಟ್ಟ ಪೊದೆಗಳಾಗಿ ಮಾರ್ಪಟ್ಟಿವೆ. ವಿಷ ಜಂತುಗಳು ಆಶ್ರಯ ಪಡೆಯುವ ಸ್ಥಳವಾಗಿದೆ. ಕಳ್ಳ-ಕಾಕರಿಗೂ ಅಡಗುದಾಣವಾಗಿದೆ. ಗಿಡ-ಗಂಟಿಗಳ ಎಲೆ, ತ್ಯಾಜ್ಯಗಳು ಕೊಳೆತು ನಾರುತ್ತಿವೆ. ಅಗೆದಿರುವ ಗುಂಡಿಯಲ್ಲಿ ಕೊಳೆಯುತ್ತಿರುವ ತ್ಯಾಜ್ಯಗಳ ಜೊತೆಗೆ ಸುರಿದ ಮಳೆನೀರು ಸಂಗ್ರಹಗೊಳ್ಳುತ್ತಿದೆ. ಇಲ್ಲಿಯ ವಾತಾವರಣ ಮಾರಕ ಸೊಳ್ಳೆಗಳ ಸಂತಾನೋತ್ಪತ್ತಿಗೆ ಪೂರಕವಾಗಿದ್ದು, ಸೊಳ್ಳೆಗಳ ಉತ್ಪಾದನೆಯ ಕಾರ್ಖಾನೆಯಾಗಿ ಮಾರ್ಪಟ್ಟಿದೆ.
ನಗರದ ಹೃದಯಭಾಗದಲ್ಲಿಯೇ ಈ ಸ್ಥಳ ಇರುವುದರಿಂದ ಸೊಳ್ಳೆ ಕಡಿತದಿಂದ ಉಂಟಾಗುವ ಜ್ವರ ಬಾಧೆಗಳು ಸಾರ್ವಜನಿಕ ವಲಯದಲ್ಲಿ ಪಸರಿಸಲು ಕಾರಣವಾಗುತ್ತಿದೆ. ಈ ಪರಿಸರದಲ್ಲಿ ಯಾತ್ರಿಕರ ವಸತಿ ಗೃಹಗಳು, ವಾಣಿಜ್ಯ ಕಟ್ಟಡಗಳು, ಆಭರಣ ಮಳಿಗೆಗಳು, ಜನವಸತಿಗಳು ಹಾಗೂ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯೂ ಕಾರ್ಯನಿರ್ವಹಿಸುತ್ತಿದೆ. ಆದರೂ ಸ್ಥಳೀಯ ಆಡಳಿತ ಗಿಡಗಂಟಿಗಳನ್ನು ಕಟಾವುಗೊಳಿಸಲು ಇದುವರೆಗೂ ಪ್ರಯತ್ನಿಸಿಲ್ಲ. ತಕ್ಷಣ ಸಂಬಂಧಪಟ್ಟವರು ಸಮಸ್ಯೆ ಬಗೆಹರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
PublicNext
06/08/2026 10:53 pm
LOADING...