ಚಿಕ್ಕೋಡಿ: ಅಪಾರ ಸ್ಮರಣಶಕ್ತಿ ಮತ್ತು ವಿಸ್ಮಯಕಾರಿ ಗ್ರಹಣ ಸಾಮರ್ಥ್ಯದ ಮೂಲಕ ಚಿಕ್ಕೋಡಿ ತಾಲೂಕಿನ ನೇಜ ಗ್ರಾಮದ ವಚನಾ ವೀರೇಶ ಪಾಟೀಲ (2 ವರ್ಷ, 1 ತಿಂಗಳು) ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ ಸಾಧಕಿಯಾಗಿ ಹೊರಹೊಮ್ಮಿದ್ದಾಳೆ.
ಹಾವೇರಿ ಮೂಲದವರೂ, ಪ್ರಸ್ತುತ ನೇಜ ಗ್ರಾಮದ ನಿವಾಸಿಯೂ ಆದ ಸಂಸ್ಕೃತಿ ಚಿಂತಕ ವೀರೇಶ ಗ. ಪಾಟೀಲ ಅವರ ಸುಪುತ್ರಿಯಾದ ಈ ಕಂದಮ್ಮ, ತನ್ನ ಅತ್ಯದ್ಭುತ ನೆನಪಿನ ಶಕ್ತಿಯಿಂದ ರಾಷ್ಟ್ರಮಟ್ಟದ ಗಮನ ಸೆಳೆದಿದ್ದಾಳೆ.
ಸಾಮಾನ್ಯ ಜ್ಞಾನ, ಭಾಷಾ ಜ್ಞಾನ ಮತ್ತು ವೈವಿಧ್ಯಮಯ ವಿಷಯಗಳನ್ನು ಕನಿಷ್ಠ ವಯಸ್ಸಿನಲ್ಲಿ ಸರಾಗವಾಗಿ ನೆನಪಿಟ್ಟುಕೊಳ್ಳುವ ಮೂಲಕ ವಚನಾ ಈ ಸಾಧನೆ ಮಾಡಿದ್ದಾಳೆ.
21ಕ್ಕೂ ಹೆಚ್ಚು ರಾಷ್ಟ್ರೀಯ ನಾಯಕರು, 14ಕ್ಕೂ ಅಧಿಕ ಸಮಾಜ ಸುಧಾರಕರು, 26ಕ್ಕೂ ಹೆಚ್ಚು ಸಂತ ಮಹಾತ್ಮರು ಹಾಗೂ ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳನ್ನು ನಿಖರವಾಗಿ ಗುರುತಿಸುತ್ತಾಳೆ. ಇಂಗ್ಲಿಷ್ ಅಕ್ಷರಮಾಲೆಯ (A to Z) ಪ್ರತಿಯೊಂದು ಅಕ್ಷರಕ್ಕೂ ಸೂಕ್ತ ಶರಣರ ಹೆಸರುಗಳನ್ನು ಜೋಡಿಸಿ ಹೇಳುವ ಅಪರೂಪದ ಕೌಶಲ್ಯ ಹೊಂದಿದ್ದಾಳೆ.
60ಕ್ಕೂ ಹೆಚ್ಚು ಇಂಗ್ಲಿಷ್ ಪದಗಳಿಗೆ ಕನ್ನಡ ಅರ್ಥ ಹೇಳುವ ಈ ಬಾಲಕಿ, ಮಾನವನ ದೇಹದ ಅಂಗಾಂಗಗಳ ಹೆಸರುಗಳನ್ನು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ವಿವರಿಸುತ್ತಾಳೆ.
15ಕ್ಕೂ ಹೆಚ್ಚು ಜಿಕೆ ಪ್ರಶ್ನೆಗಳಿಗೆ ಉತ್ತರಿಸುವ ಜೊತೆಗೆ 10ಕ್ಕೂ ಹೆಚ್ಚು ಸಂಸ್ಕೃತ ಶ್ಲೋಕಗಳನ್ನು ಪಠಿಸುತ್ತಾಳೆ. ಭಾರತದ ರಾಜ್ಯಗಳು, ಕರ್ನಾಟಕದ ಜಿಲ್ಲೆಗಳು, ಖಂಡಗಳು, ದಿಕ್ಕುಗಳು, ದಿನಗಳು ಹಾಗೂ ತಿಂಗಳುಗಳ ಹೆಸರುಗಳನ್ನು ಸ್ಪಷ್ಟವಾಗಿ ನೆನಪಿನಲ್ಲಿಟ್ಟುಕೊಂಡಿದ್ದಾಳೆ.
ಪ್ರಾಣಿ, ಪಕ್ಷಿ, ಹೂವು, ಹಣ್ಣು, ತರಕಾರಿ ಸೇರಿದಂತೆ 100ಕ್ಕೂ ಅಧಿಕ ಚಿತ್ರಗಳನ್ನು ಕ್ಷಣಾರ್ಧದಲ್ಲಿ ಗುರುತಿಸುವ ಸಾಮರ್ಥ್ಯ ಹೊಂದಿದ್ದಾಳೆ.
ಒಟ್ಟಿನಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ನಾಡಿನ ಸಂಸ್ಕೃತಿ ಮತ್ತು ಜ್ಞಾನವನ್ನು ಮೈಗೂಡಿಸಿಕೊಂಡು ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿರುವ ವಚನಾಳ ಈ ಅಪರೂಪದ ಸಾಧನೆಗೆ ಗ್ರಾಮಸ್ಥರು ಹಾಗೂ ವಿವಿಧ ವಲಯದ ಗಣ್ಯರು ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.
-ಡಿ.ಕೆ.ಉಪ್ಪಾರ, ಪಬ್ಲಿಕ್ ನೆಕ್ಸ್ಟ್, ಚಿಕ್ಕೋಡಿ
PublicNext
24/08/2026 03:37 pm
LOADING...