ಮಡಿಕೇರಿ: ಮಡಿಕೇರಿ ನಗರದ ಸಂಪಿಗೆಕಟ್ಟೆ ಬಳಿ ಅನುಮಾನಾಸ್ಪದವಾಗಿ ಅಕ್ಕಿ ಸಾಗಿಸುತ್ತಿದ್ದ ವಾಹನವನ್ನು ಕೊಡಗು ಅಭಿವೃದ್ಧಿ ಸಮಿತಿಯ ಸದಸ್ಯರು ತಡೆದು ಪರಿಶೀಲಿಸಿದ್ದಾರೆ. ವಾಹನದಲ್ಲಿ 25 ಕೆಜಿಯ 60ಕ್ಕೂ ಅಧಿಕ ಅಕ್ಕಿ ಮೂಟೆಗಳು ಪತ್ತೆಯಾಗಿವೆ. ಸೊಸೈಟಿಗೆ ಸೇರಬೇಕಿದ್ದ ಪಡಿತರ ಅಕ್ಕಿಯನ್ನೇ ಕಾಳಸಂತೆಗೆ ಸಾಗಿಸಲಾಗುತ್ತಿತ್ತೇ ಎಂಬ ಅನುಮಾನ ಇದೀಗ ಮೂಡಿದೆ.
ಅನುಮಾನಗೊಂಡ ಸಮಿತಿ ಸದಸ್ಯರು ವಾಹನವನ್ನು ತಡೆದು ಅಕ್ಕಿ ಮೂಟೆಗಳನ್ನು ಪರಿಶೀಲಿಸಿದ ಬಳಿಕ ಆಹಾರ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಮೇರೆಗೆ ರಾತ್ರಿಯೇ ಸ್ಥಳಕ್ಕೆ ಫುಡ್ ಇನ್ಸ್‌ಪೆಕ್ಟರ್ ವೀಣಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮಡಿಕೇರಿ ನಗರ ಠಾಣೆಯ ಎಸ್‌ಐ ಶ್ರೀಧರ್ ಅವರಿಗೂ ಮಾಹಿತಿ ನೀಡಲಾಗಿದೆ. ಬಳಿಕ ಅಕ್ಕಿ ಮೂಟೆಗಳಿದ್ದ ವಾಹನವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇಷ್ಟೊಂದು ಪ್ರಮಾಣದ ಅಕ್ಕಿ ಎಲ್ಲಿಂದ ಬಂತು? ಎಲ್ಲಿಗೆ ಸಾಗಿಸಲಾಗುತ್ತಿತ್ತು? ಇದರ ಹಿಂದೆ ಯಾರಿದ್ದಾರೆ? ಎಂಬ ಹಲವು ಪ್ರಶ್ನೆಗಳು ಇದೀಗ ಎದುರಾಗಿವೆ. ಅಕ್ಕಿಯ ಮೂಲ ಹಾಗೂ ಸಾಗಾಟದ ಉದ್ದೇಶದ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಬಡವರಿಗೆ ಸೇರಬೇಕಾದ ಪಡಿತರ ಅಕ್ಕಿ ಅಕ್ರಮವಾಗಿ ಮಾರಾಟವಾಗುತ್ತಿದೆಯೇ ಎಂಬ ಅನುಮಾನಕ್ಕೆ ತನಿಖೆಯಿಂದಲೇ ಉತ್ತರ ಸಿಗಬೇಕಿದೆ. ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ಅಕ್ರಮ ಸಾಗಾಟಕ್ಕೆ ಕಡಿವಾಣ ಹಾಕುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
PublicNext
04/09/2026 10:31 pm
LOADING...