ಮಡಿಕೇರಿ: ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವವು ಈ ಬಾರಿ ಅಕ್ಟೋಬರ್, 17 ರಂದು ರಾತ್ರಿ 07.50 ಗಂಟೆಗೆ ಸಲ್ಲುವ ಮೇಷ ಲಗ್ನದಲ್ಲಿ ಸಂಭವಿಸಲಿದ್ದು, ಭಕ್ತಾಧಿಗಳಿಗೆ ಯಾವುದೇ ರೀತಿಯಲ್ಲಿ ಕಿರಿಕಿರಿ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಸೂಚಿಸಿದ್ದಾರೆ.
ಭಾಗಮಂಡಲದ ಭಗಂಡೇಶ್ವರ ದೇವಾಲಯದ ಹಳೇ ಮುಡಿ ಕಟ್ಟಡದಲ್ಲಿ ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಸಂಬಂಧ ಬುಧವಾರ ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ ಬಾರಿಯಂತೆ ಈ ಬಾರಿಯೂ ಸಹ ಪವಿತ್ರ ತೀರ್ಥೋದ್ಭವ ಜಾತ್ರೆಗೆ ಅಗತ್ಯ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಭಕ್ತಾಧಿಗಳಿಗೆ ಯಾವುದೇ ರೀತಿ ಕಿರಿಕಿರಿ ಉಂಟಾಗದಂತೆ ಎಚ್ಚರವಹಿಸಬೇಕು. ವಿವಿಧ ಸಂಘ ಸಂಸ್ಥೆಗಳು ನೀಡಿರುವ ಸಲಹೆ, ಮಾರ್ಗದರ್ಶನವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ನಾಡಿನ ಜೀವನದಿ ಕಾವೇರಿ ಉಗಮ ಸ್ಥಾನ ತಲಕಾವೇರಿಯ ಪುಣ್ಯ ಕ್ಷೇತ್ರದಲ್ಲಿ ಶ್ರದ್ಧಾಭಕ್ತಿಯಿಂದ ಪವಿತ್ರ ತೀರ್ಥೋದ್ಭವ ಕಣ್ತುಂಬಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುವುದರಿಂದ ಯಾವುದೇ ರೀತಿ ನೂಕು ನುಗ್ಗಲು ಉಂಟಾಗದಂತೆ ಬ್ಯಾರಿಕೇಡ್ ಅಳವಡಿಸಬೇಕು. ಭಾಗಮಂಡಲದಿಂದ ತಲಕಾವೇರಿವರೆಗೆ ಬೆಳಕು ವ್ಯವಸ್ಥೆ ಮಾಡುವುದು, ರಸ್ತೆ ಬದಿ ಗಿಡ ಗಂಟೆಗಳನ್ನು ಕಡಿಯುವುದು, ಭಾಗಮಂಡಲ-ಕರಿಕೆ, ಭಾಗಮಂಡಲ-ನಾಪೋಕ್ಲು, ಭಾಗಮಂಡಲ-ಮಡಿಕೇರಿ, ಭಾಗಮಂಡಲ-ಚೆಯ್ಯಂಡಾಣೆ ಮಾರ್ಗದ ರಸ್ತೆ ಬದಿಯ ಗಿಡಗಳನ್ನು ಕಡಿಯುವಂತೆ ನಿರ್ದೇಶನ ನೀಡಿದರು. ಕೆಎಸ್‍ಆರ್‍ಟಿಸಿ ಇಲಾಖೆಯಿಂದ ಹೆಚ್ಚಿನ ಬಸ್‍ಗಳ ವ್ಯವಸ್ಥೆ ಮಾಡುವುದು ಹಾಗೂ ಅಕ್ಟೋಬರ್, 17 ಮತ್ತು 18 ರಂದು ಭಾಗಮಂಡಲದಿಂದ ತಲಕಾವೇರಿಗೆ, ತಲಕಾವೇರಿಯಿಂದ ಭಾಗಮಂಡಲಕ್ಕೆ ಉಚಿತ ಸಾರಿಗೆ ಸಂಪರ್ಕ ಕಲ್ಪಿಸುವಂತೆ ಎ.ಎಸ್.ಪೊನ್ನಣ್ಣ ಅವರು ತಿಳಿಸಿದರು.
ತುಲಾ ಸಂಕ್ರಮಣ ಜಾತ್ರಾ ಪ್ರಯುಕ್ತ ಭಕ್ತಾಧಿಗಳು ಭಾಗಮಂಡಲದಿಂದ ತಲಕಾವೇರಿಯವರೆಗೆ ಪಾದಯಾತ್ರೆ ಕೈಗೊಳ್ಳುವುದರಿಂದ ಒಂದು ಬದಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡುವಂತೆ ನಿರ್ದೇಶನ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಅಗತ್ಯ ಆರೋಗ್ಯ ಸೇವೆ ವಾಹನ, ತಜ್ಜ ವೈದ್ಯರು ಮತ್ತು ಶುಶ್ರೂಷಕರನ್ನು ನಿಯೋಜನೆ ಮಾಡುವಂತೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ತಿಳಿಸಿದರು.
ಭಾಗಮಂಡಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಒತ್ತು ನೀಡಬೇಕು. ಮೊಬೈಲ್ ಶೌಚಾಲಯ ವ್ಯವಸ್ಥೆ ಮಾಡುವುದು, ಬೀದಿ ದೀಪಗಳ ಅಳವಡಿಕೆ, ಅಗತ್ಯ ಇರುವ ಕಡೆಗಳಲ್ಲಿ ಕಸದ ಬುಟ್ಟಿ ಇಡುವುದು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಎ.ಎಸ್.ಪೊನ್ನಣ್ಣ ಅವರು ಸೂಚಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಕಾಡೆಮಿ ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಕಾವೇರಿ ಮಾತೆ ಕುರಿತು ಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮ ಏರ್ಪಡಿಸುವಂತೆ ಶಾಸಕರಾದ ಎ,ಎಸ್.ಪೊನ್ನಣ್ಣ ಅವರು ಸಲಹೆ ಮಾಡಿದರು.
ಅಗ್ನಿಶಾಮಕ ಮತ್ತು ತುರ್ತು ಸೇವೆ ಇಲಾಖೆಯಿಂದ ಜಾತ್ರಾ ಸಂದರ್ಭದಲ್ಲಿ ಎಚ್ಚರ ಇರಬೇಕು. ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸುವುದು ಮತ್ತಿತರ ಅಗತ್ಯ ಕ್ರಮವಹಿಸುಂತೆ ನಿರ್ದೇಶನ ನೀಡಿದರು.
ವಿಧಾನಸಭೆಯ ಮಾಜಿ ಸಭಾಧ್ಯಕ್ಷರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ ಪವಿತ್ರ ತೀರ್ಥೋದ್ಭವ ಸಂದರ್ಭದಲ್ಲಿ ಭಕ್ತಾಧಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಗಮನಹರಿಸಬೇಕು. ಜನರ ಭಾವನೆಗೆ ಪೂರಕವಾಗಿ ಅಧಿಕಾರಿಗಳು ಕೆಲಸ ಮಾಡಬೇಕು ಎಂದರು.
Kshetra Samachara
17/09/2026 06:40 am