ಮಡಿಕೇರಿ : ಇತಿಹಾಸ ಪ್ರಸಿದ್ಧ ಮಡಿಕೇರಿ ದಸರಾ ಜನೋತ್ಸವದ ಧಾರ್ಮಿಕ ಆಕರ್ಷಣೆಯಾದ ನಾಲ್ಕು ಶಕ್ತಿ ದೇವತೆಗಳ ಕರಗೋತ್ಸವದ ಶೋಭಾಯಾತ್ರೆ ವಿಜಯದಶಮಿಯ ದಿನವಾದ ಅ.21ರಂದು ನಡೆಯಲಿದೆ ಎಂದು ಶ್ರೀ ಕಂಚಿಕಾಮಾಕ್ಷಿಯಮ್ಮ ದೇವಾಲಯ ಸಮಿತಿಯ ಗೌರವಾಧ್ಯಕ್ಷ ಜಿ.ವಿ. ರವಿಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಶ್ರೀ ಕಂಚಿಕಾಮಾಕ್ಷಿಯಮ್ಮ ದೇವಸ್ಥಾನದಲ್ಲಿ ಸೆ.16ರಂದು ಸಂಪ್ರದಾಯದಂತೆ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ನಾಲ್ಕು ಶಕ್ತಿ ದೇವತೆಗಳ ದೇವಸ್ಥಾನಗಳ ಅರ್ಚಕರು, ಗೌಳಿ ಸಮುದಾಯದ ಪ್ರಮುಖರು ಹಾಗೂ ಆಡಳಿತ ಮಂಡಳಿ ಸದಸ್ಯರು ಕರಗೋತ್ಸವದ ಶೋಭಾಯಾತ್ರೆಯ ಕುರಿತು ಚರ್ಚಿಸಿ ಈ ನಿರ್ಣಯ ಕೈಗೊಂಡಿದ್ದಾರೆ ಎಂದರು.
ಸಭೆಯ ನಿರ್ಣಯದಂತೆ ಮಹಾಲಯ ಅಮಾವಾಸ್ಯೆಯ ಮರುದಿನವಾದ ಅ.11ರಂದು ಶ್ರೀ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಶ್ರೀ ಕಂಚಿಕಾಮಾಕ್ಷಿಯಮ್ಮ, ಶ್ರೀ ದಂಡಿನ ಮಾರಿಯಮ್ಮ ಹಾಗೂ ಶ್ರೀ ಕೋಟೆ ಮಾರಿಯಮ್ಮ ದೇವಸ್ಥಾನಗಳಿಂದ ಸಂಪ್ರದಾಯದಂತೆ ಕರಗಗಳು ಆರಂಭಗೊಳ್ಳಲಿವೆ. ಬಳಿಕ ಆಯುಧಪೂಜೆಯ ಮರುದಿನವಾದ ವಿಜಯದಶಮಿಯ ಅ.21ರಂದು ರಾತ್ರಿ ನಾಲ್ಕು ಕರಗಗಳ ಶೋಭಾಯಾತ್ರೆ ನಡೆಯಲಿದ್ದು, ಬನ್ನಿಮಂಟಪದ ಪಂಪ್ ಕೆರೆಗೆ ತೆರಳಿ ಬನ್ನಿ ಕಡಿಯುವ ಸಾಂಪ್ರದಾಯಿಕ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಕರಗೋತ್ಸವದ ದಿನವನ್ನು ನಾಲ್ಕು ಶಕ್ತಿ ದೇವತೆಗಳ ದೇವಸ್ಥಾನಗಳ ಪದಾಧಿಕಾರಿಗಳು ಶ್ರೀ ಕಂಚಿಕಾಮಾಕ್ಷಿಯಮ್ಮ ದೇವಸ್ಥಾನದಲ್ಲಿ ಸಭೆ ಸೇರಿ ಚರ್ಚಿಸಿ ನಿಗದಿಪಡಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಅದರಂತೆ ಇದೀಗ ಅ.21ರಂದು ಕರಗೋತ್ಸವ ನಡೆಸಲು ನಿರ್ಧರಿಸಲಾಗಿದ್ದು, ಈ ಕುರಿತು ಯಾವುದೇ ಗೊಂದಲವಿಲ್ಲ ಎಂದು ಜಿ.ವಿ. ರವಿಕುಮಾರ್ ಸ್ಪಷ್ಟಪಡಿಸಿದರು.
Kshetra Samachara
18/09/2026 06:41 am
LOADING...