ವಿರಾಜಪೇಟೆ : ಕೊಡಗಿನ ವಿರಾಜಪೇಟೆಗೆ ಕೇರಳ ರಾಜ್ಯದಿಂದ ಮಾಕುಟ್ಟ ಗೇಟ್ ಮೂಲಕ ಬರುವ ಚಿತ್‌ಕಲ್‌ಗಳನ್ನು ತರುವ ಲಾರಿಗಳಿಂದ ಕಾಂಗ್ರೆಸ್ ಮುಖಂಡರು ಹಫ್ತಾ ವಸೂಲಿ ಮಾಡುವ ದೃಶ್ಯಗಳು ಜಾಲತಾಣಗಳಲ್ಲಿ ಕಂಡುಬರುತ್ತಿವೆ. ಈ ಸಂಬಂಧ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಇತ್ತ ಗಮನ ಹರಿಸಿ, ಪಕ್ಷದ ಮುಖಂಡರ ಹಫ್ತಾ ವಸೂಲಿ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕ ಸಮಿತಿ ಸಂಚಾಲಕ ಡಾ. ದುರ್ಗಾ ಪ್ರಸಾದ್ ಹೇಳಿದರು.
ಪಟ್ಟಣದಲ್ಲಿರುವ ನಾಗರಿಕ ಸಮಿತಿ ಕಚೇರಿಯಲ್ಲಿ ಕರೆದಿದ್ದ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿರಾಜಪೇಟೆಯಲ್ಲಿ ಕಾನೂನುಬಾಹಿರ ಚಟುವಟಿಕೆಗಳು ಹಾಗೂ ಕೃತ್ಯಗಳು ಹೆಚ್ಚಾಗಿ ನಡೆಯುತ್ತಿವೆ. ಯಾವುದೇ ಜನದ್ರೋಹಿ ಕೃತ್ಯಗಳನ್ನು ಎಸಗಿದರೂ ತಮ್ಮನ್ನು ರಕ್ಷಿಸಲು ತಮ್ಮ ಪ್ರತಿನಿಧಿಗಳು ಇದ್ದಾರೆ ಎಂಬ ಅಹಂಭಾವದಿಂದ ಅವರ ಶಿಷ್ಯರು ಮೆರೆಯುತ್ತಿರುವುದು ಸರಿಯಲ್ಲ. ಪೆರುಂಬಾಡಿ-ಮಾಕುಟ್ಟ ರಸ್ತೆಯಲ್ಲಿ ವಾಹನಗಳಿಂದ ಹಫ್ತಾ ವಸೂಲಿ ಮಾಡುತ್ತಿರುವ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದುರ್ಗಾಪ್ರಸಾದ್ ಆಗ್ರಹಿಸಿದರು.
ನಾಗರಿಕ ಸಮಿತಿ ಸಹ ಸಂಚಾಲಕ ಮಲೇಟಿರ ಎಸ್. ಕಾಳಯ್ಯ ಮಾತನಾಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಜನರಿಗೆ ಸ್ಪಂದಿಸುವಂತೆ ಕೆಲಸ ಮಾಡಬೇಕು. ಜನರ ತಾಳ್ಮೆಯನ್ನು ಪರೀಕ್ಷಿಸಬಾರದು. ಸಿಕ್ಕಿರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಜನರಿಗೆ ಬೇಕಾಗಿರುವ ಸೌಲಭ್ಯಗಳನ್ನು ದೊರಕಿಸಿಕೊಡಬೇಕು. ಬೇಲಿಯೇ ಎದ್ದು ಹೊಲ ಮೇಯಿದಂತೆ ಮುಖಂಡರೇ ಹಫ್ತಾ ವಸೂಲಿ ಮಾಡಲು ಹೊರಟಿರುವುದು ಒಳ್ಳೆಯ ನಡತೆಯಲ್ಲ. ಈ ಬಗ್ಗೆ ಶಾಸಕರು ಗಮನಹರಿಸಬೇಕು ಎಂದು ಒತ್ತಾಯಿಸಿದರು.
PublicNext
05/09/2026 06:54 am
LOADING...