ವಿಜಯಪುರ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನಾಗೇಂದ್ರ ರಾಜೀನಾಮೆ ವಿಚಾರದಲ್ಲಿ ಮಾತನಾಡಿದ ಯತ್ನಾಳ್, “ಸದನ ನಡೆಸಿಕೊಡಬಾರದು ಎಂದು ಡಿ.ಕೆ. ಶಿವಕುಮಾರ್ ಮಾಡಿಸಿದ್ದರು. ವಿಜಯೇಂದ್ರಗೆ ಡಿ.ಕೆ. ಶಿವಕುಮಾರ್ ನಿರ್ದೇಶನ ಮಾಡಿದರೂ, ಅವರ ಅಡಿಯಾಳಾದಂತಹ ವಿಜಯೇಂದ್ರಗೆ ಹೇಳಿದರೂ ಆರ್. ಅಶೋಕ, ಸುನೀಲ್ ಕುಮಾರ್ ಸೇರಿದಂತೆ ಹಲವರು ಬಾವಿಗೆ ಇಳಿದು ಹೋರಾಟ ಮಾಡಿದರು. ಆದರೆ ವಿಜಯೇಂದ್ರ ಐದು ನಿಮಿಷವೂ ಬಾವಿಯಲ್ಲಿ ನಿಂತಿಲ್ಲ” ಎಂದು ಟೀಕಿಸಿದರು.
“ಕ್ರೆಡಿಟ್ ಬರೀ ಪುಕ್ಸಟ್ಟೆ ಸಿಗುತ್ತಾ? ಒಂದು ಪಾದಯಾತ್ರೆ ಮಾಡಿದರೆ ಕ್ರೆಡಿಟ್ ಬಂದುಬಿಡುತ್ತಾ? ಇದೀಗ ಹೀರೋ ಆಗಬೇಕು ಅಂತಾ ಪಾದಯಾತ್ರೆ ನಡೆಸುತ್ತಿದ್ದಾರೆ” ಎಂದು ವ್ಯಂಗ್ಯವಾಡಿದರು.
“ತಮ್ಮನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದುಹಾಕುತ್ತಾರೆ ಎಂಬ ಭಯ ವಿಜಯೇಂದ್ರಗೆ ಬಂದಿದೆ. ತೆಗೆದುಹಾಕುವುದು ಗ್ಯಾರಂಟಿ ಆದ ಮೇಲೆ ಪಾದಯಾತ್ರೆ ಗ್ಯಾರಂಟಿಯಾಗಿದೆ. ವಾರಂಟಿ ಮುಗಿದಿದೆ, ಅದಕ್ಕೆ ಏನಾದರೂ ಮಾಡಿ ತಮ್ಮ ಅಸ್ತಿತ್ವ ತೋರಿಸುತ್ತಿದ್ದಾರೆ” ಎಂದು ಯತ್ನಾಳ್ ಹೇಳಿದರು.
ಇದೇ ವೇಳೆ ಕೆಪಿಎಸ್‌ಸಿ ಹಗರಣದ ಬಗ್ಗೆಯೂ ಯತ್ನಾಳ್ ಗಂಭೀರ ಆರೋಪ ಮಾಡಿದರು.
“ಕೆಪಿಎಸ್‌ಸಿ ಹಗರಣದಲ್ಲಿ ವಿಜಯೇಂದ್ರನ ಪಾತ್ರ ಇದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ಪಾತ್ರವೂ ಇದೆ. ಕೆಪಿಎಸ್‌ಸಿ ವಿಚಾರದಲ್ಲಿ ಹೋರಾಟ ಮಾಡಿದರೆ ನೀವು ಸಿಕ್ಕಿಬೀಳುತ್ತೀರಿ ಎಂಬ ಕಾರಣಕ್ಕೆ ಮಾಡುತ್ತಿಲ್ಲ” ಎಂದು ಆರೋಪಿಸಿದರು.
ಪಿಯಾಂಕಾ ಖರ್ಗೆ ವಿಚಾರದಲ್ಲೂ ಯತ್ನಾಳ್ ಪ್ರತಿಕ್ರಿಯೆ
ಪಿಯಾಂಕಾ ಖರ್ಗೆ ಕುರಿತಂತೆ ಎಚ್.ಡಿ. ಕುಮಾರಸ್ವಾಮಿ ಅವರು “ಬಹಿರಂಗಪಡಿಸಿದರೆ ಭೂಕಂಪ ಆಗಲಿದೆ” ಎಂಬ ಹೇಳಿಕೆ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್, “ಭೂಕಂಪ ಆಗಲಿ. ಆ ದಿನ ನಾವು ಮನೆಯಿಂದ ಹೊರಗೇ ಇರುತ್ತೇವೆ. ಹಿಂದೆ ಪೆನ್‌ಡ್ರೈವ್ ವಿಚಾರದಲ್ಲಿ ಮಾಡಿದ ಹಾಗೆ ಮಾಡುವುದು ಬೇಡ. ಇದನ್ನಾದರೂ ಬಹಿರಂಗಪಡಿಸಲಿ. ಭೂಕಂಪ ಎದುರಿಸಲು ನಾವು ಸಿದ್ಧರಿದ್ದೇವೆ” ಎಂದು ಹೇಳಿದರು.
PublicNext
08/09/2026 11:51 pm