ಸಿದ್ದಾಪುರ : ಅಂಬೇಡ್ಕರ್, ಬುದ್ಧ, ಬಸವಣ್ಣ, ನ್ಯಾಯಾಧೀಶರು, ಗೃಹಮಂತ್ರಿ, ಪೊಲೀಸ್ ಇಲಾಖೆ, ಎಸ್‌ಸಿ, ಎಸ್‌ಟಿ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆಗಳ ಮೂಲಕ ಜಾತಿನಿಂದನೆ ಮಾಡಿದ ಘಟನೆಯನ್ನು ಖಂಡಿಸಿ, ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೂಕಿನ ವೇದಮೂರ್ತಿ ಎಂಬುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಿದ್ದಾಪುರ ಘಟಕದ ವತಿಯಿಂದ ಸಿದ್ದಾಪುರ ಇನ್‌ಸ್ಪೆಕ್ಟರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಡಾ. ಬಿ.ಆರ್. ಅಂಬೇಡ್ಕರ್ ಅವರು ದೇಶದ ಜನತೆಯ ಒಳಿತಿಗಾಗಿ ಸಂವಿಧಾನವನ್ನು ರಚಿಸಿ, ಜನತೆಗೆ ಬದುಕು ಕಲ್ಪಿಸಿಕೊಟ್ಟ ಮಹಾನ್ ವ್ಯಕ್ತಿ. ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿ ನಿಂದಿಸಿರುವ ವೇದಮೂರ್ತಿ ವಿರುದ್ಧ ಕ್ರಮ ಕೈಗೊಳ್ಳಬೇಕು. ದಲಿತ ವಿರೋಧಿ ಹೇಳಿಕೆ ನೀಡಿರುವುದರಿಂದ ಜಾತಿನಿಂದನೆ ಪ್ರಕರಣ ದಾಖಲಿಸಬೇಕು. ಅವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಹಾಗೂ ಅವರಿಗೆ ಸಹಕಾರ ನೀಡಿದ ಎಲ್ಲರ ಮೇಲೂ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿ ಮನವಿ ನೀಡಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಿಂದ ವೇದಮೂರ್ತಿ ವಿರುದ್ಧ ಘೋಷಣೆ ಕೂಗುತ್ತಾ ಪೊಲೀಸ್ ಠಾಣೆ ತಲುಪಿ ಆಕ್ರೋಶ ಹೊರಹಾಕಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಎಚ್.ಎನ್. ಕಿರಣ್ ಕುಮಾರ್, ತಾಲೂಕು ಸಂಚಾಲಕ ಶಿವರಾಮ ಬಳ್ಳಟ್ಟೆ, ನಗರ ಕಮಿಟಿ ಸಂಚಾಲಕ ಪರಶುರಾಮ್ ಭೋವಿ, ಖಜಾಂಚಿ ಲಕ್ಷ್ಮಣ್ ಬೋರ್ಕರ್, ಮಂಜುನಾಥ ಮ್ಯಾದರ್, ಸಂತೋಷ ಚನ್ನಾಯ್ಯ, ಮಂಜುನಾಥ ಹಸ್ಲರ್, ಸಂದೇಶ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
09/09/2026 03:18 pm
LOADING...