ಶಿರಸಿ : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿಶೇಷ ಆಸಕ್ತಿಯಿಂದ ಸೆ. 21ರಿಂದ 23ರವರೆಗೆ ಬೆಂಗಳೂರಿನಲ್ಲಿ ಕರೆಯಲಾಗಿರುವ ವಿಶೇಷ ಅಧಿವೇಶನದಲ್ಲಿ ಉತ್ತರ ಕನ್ನಡ ಜಿಲ್ಲೆಯ ರೈತರ ಪರ 5 ಅಂಶಗಳ ಕುರಿತು ಧ್ವನಿ ಎತ್ತಬೇಕು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಜಿಲ್ಲೆಯ ಶಾಸಕರಿಗೆ ಆಗ್ರಹಿಸಿದರು.
ನಗರದ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಕಚೇರಿಯಲ್ಲಿ ಶನಿವಾರ ನಡೆದ ವೇದಿಕೆಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವರು 5 ಅಂಶಗಳ ಮಾರ್ಗಸೂಚಿ ಪಟ್ಟಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಜಿಲ್ಲೆಯ 64 ಸಾವಿರ ಹೆಕ್ಟೇರ್ ಅರಣ್ಯ ಭೂಮಿಯನ್ನು ರಾಷ್ಟ್ರೀಯ ಯೋಜನೆಗಳಿಗೆ ನೀಡುತ್ತಿರುವ ಸರ್ಕಾರ, ಜೀವನ ಮತ್ತು ವಾಸ್ತವ್ಯಕ್ಕಾಗಿ ಸುಮಾರು 80 ಸಾವಿರ ಕುಟುಂಬಗಳು ಅತಿಕ್ರಮಿಸಿರುವ 18 ಸಾವಿರ ಹೆಕ್ಟೇರ್ ಅರಣ್ಯ ಭೂಮಿಯನ್ನು ಸಾಗುವಳಿ ಭೂಮಿಯಾಗಿ ನೀಡುವ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
1978ರ ಪೂರ್ವದಲ್ಲಿ ಅರಣ್ಯ ಭೂಮಿ ಸಾಗುವಳಿ ಮಾಡುತ್ತಿರುವವರಿಗೆ 1976ರಲ್ಲಿ ಕೇಂದ್ರ ಸರ್ಕಾರ ಮಂಜೂರಿಗೆ ಅನುಮೋದನೆ ನೀಡಿದ್ದರೂ, ಅರಣ್ಯಕ್ಕೆ ಬದಲಿ ಕಂದಾಯ ಭೂಮಿಯನ್ನು ವರ್ಗಾಯಿಸದಿರುವುದು ಹಾಗೂ ಜಿಲ್ಲೆಯಲ್ಲಿ ಸಾವಿರಕ್ಕೂ ಅಧಿಕ ಅರಣ್ಯ ಭೂಮಿ ಹಂಗಾಮಿ ಭೂಮಿಯನ್ನು ಖಾಯಂ ಲಾಗಣಿಯಾಗಿ ಮಾಡದಿರುವ ಕುರಿತು ವಿಶೇಷ ಅಧಿವೇಶನದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು ಎಂದು ಹೇಳಿದರು.
ಪಂಚಾಯತ್ ರಾಜ್ ಇಲಾಖೆಯಲ್ಲಿ ಅನಧಿಕೃತ ಕಟ್ಟಡಗಳಿಗೆ ವಿಧಿಸಲಾಗುತ್ತಿರುವ ತೆರಿಗೆಯನ್ನು ರದ್ದುಪಡಿಸುವ ಕುರಿತು ತೀರ್ಮಾನ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅರಣ್ಯ ಹಕ್ಕು ಕಾಯಿದೆ ಅನುಷ್ಠಾನದಲ್ಲಿ ಕಾನೂನುಬಾಹಿರವಾಗಿ ಹಾಗೂ ಕಾಯಿದೆಗೆ ವ್ಯತಿರಿಕ್ತವಾಗಿ ಅರ್ಜಿಗಳನ್ನು ತಿರಸ್ಕರಿಸುವ ಕುರಿತು ಚರ್ಚಿಸಬೇಕು. ಸಂಬಂಧಿತ ದಾಖಲೆಗಳ ಆಧಾರದ ಮೇಲೆ ಕೇಂದ್ರ ಸರ್ಕಾರ ನೀಡಿರುವ ಸುತ್ತೋಲೆ ಹಾಗೂ ಕಾಯಿದೆಯಲ್ಲಿನ ತಿದ್ದುಪಡಿ ಅಂಶದಂತೆ, ನಿರ್ದಿಷ್ಟ ದಾಖಲೆಗಳನ್ನು ಕಡ್ಡಾಯವಾಗಿ ಒತ್ತಾಯಿಸಬಾರದು. ಈ ನಿಟ್ಟಿನಲ್ಲಿ ಅರಣ್ಯವಾಸಿಗಳ ಪರವಾಗಿ ನಿರ್ಣಯ ಕೈಗೊಳ್ಳಬೇಕು ಎಂದು ತಿಳಿಸಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ 74,234 ಅರ್ಜಿಗಳು ತಿರಸ್ಕೃತಗೊಂಡಿವೆ ಎಂದು ಕಳೆದ ಫೆಬ್ರವರಿ 28ರಂದು ಸಂಸತ್ತಿನಲ್ಲಿ ವರದಿ ಸಲ್ಲಿಸಲಾಗಿದೆ. ತಿರಸ್ಕೃತ ಅರ್ಜಿಗಳನ್ನು ಪುನರ್ ಪರಿಶೀಲನೆಗೆ ತೆಗೆದುಕೊಳ್ಳುವ ಕುರಿತು ವಿಶೇಷ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದು ರವೀಂದ್ರ ನಾಯ್ಕ ಒತ್ತಾಯಿಸಿದರು.
ಸಭೆಯಲ್ಲಿ ಸಂಚಾಲಕ ಇಬ್ರಾಹಿಂ ಸಾಬ ಗೌಡಳ್ಳಿ, ನೆಹರು ನಾಯ್ಕ ಬಿಳೂರು, ರಫೀಕ್ ಗೌಡಳ್ಳಿ, ಚಂದ್ರಣ್ಣ ಮರಗುಂಡಿ, ಕೃಷ್ಣ ಮರಾಠಿ ಸವಲೆ, ಪರಮೇಶ್ವರ ದೇಶಭಂಡಾರಿ ವಾನಳ್ಳಿ, ರಾಜು ಪೂಜಾರಿ, ನಾರಾಯಣ ನಾಯ್ಕ ನೆಗ್ಗು, ಕೃಷ್ಣ ಮಾದೇವ ನಾಯ್ಕ ಬಂಡಲ, ಸ್ವಾತಿ ಜೈನ್, ಯಶೋದಾ ನೌಟೂರು, ಈಶ್ವರ ನಾಯ್ಕ ಬಂಕನಾಳ, ಮಂಜು ಲಕ್ಷ್ಮಣ ನಾಯ್ಕ, ನಾರಾಯಣ ಉಮ್ಮುಡಿ, ಪಂಪಾವತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
PublicNext
19/09/2026 07:43 pm