ಭಟ್ಕಳ: ಮುರುಡೇಶ್ವರ ಹಿರೇದೋಮಿ ತೂದಳ್ಳಿಯ ಹಿಂದೂ ನಾಮಧಾರಿ ಗಣೇಶೋತ್ಸವ ಸಮಿತಿ ವತಿಯಿಂದ ಆಯೋಜಿಸಿದ್ದ ಬೆಳ್ಳಿ ಮಹೋತ್ಸವದ ಗಣೇಶೋತ್ಸವವು ಐದು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗಿ ಅದ್ದೂರಿಯಾಗಿ ಸಂಪನ್ನಗೊಂಡಿತು.
ಐದು ದಿನಗಳ ಉತ್ಸವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಭಜನೆ, ಮನರಂಜನಾ ಕಾರ್ಯಕ್ರಮಗಳು ಹಾಗೂ ಸಭಾ ಕಾರ್ಯಕ್ರಮಗಳು ನಡೆದವು. ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯಿತು. ಪ್ರತಿದಿನ ಲಘು ಉಪಾಹಾರ ಹಾಗೂ ಮೂರು ದಿನಗಳ ಕಾಲ ಮಹಾ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಉತ್ಸವದ ಕೊನೆಯ ದಿನ ನಡೆದ ಗಣೇಶ ವಿಸರ್ಜನಾ ಮೆರವಣಿಗೆ ಭರ್ಜರಿ ಮೆರುಗು ನೀಡಿತು. ವಿವಿಧ ಸ್ತಬ್ಧಚಿತ್ರಗಳು, ಟ್ಯಾಬ್ಲೋಗಳು ಹಾಗೂ ಪೌರಾಣಿಕ ವೇಷಧಾರಿಗಳು ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದ್ದರು. ದುರ್ಗಾದೇವಿ, ಮಹಿಷಾಸುರ, ಈಶ್ವರ, ಪಾರ್ವತಿ ಸೇರಿದಂತೆ ವಿವಿಧ ಪೌರಾಣಿಕ ವೇಷಗಳು ನೋಡುಗರ ಗಮನ ಸೆಳೆದವು. ಯಕ್ಷಗಾನ ವೇಷಧಾರಿಗಳ ಪ್ರದರ್ಶನ ಹಾಗೂ ಚಂಡೆ ವಾದನ ತಂಡದ ಕಲರವ ಮೆರವಣಿಗೆಯ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿತು.
ಮಹಿಳೆಯರು ಹಾಗೂ ಪುರುಷರು ಸಮವಸ್ತ್ರ ಧರಿಸಿ ಭಜನೆ ಹಾಗೂ ನೃತ್ಯದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಮೆರವಣಿಗೆ ಸಾಗಿದ ಮಾರ್ಗದುದ್ದಕ್ಕೂ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿ ಉತ್ಸವದ ವೈಭವವನ್ನು ಕಣ್ತುಂಬಿಕೊಂಡರು.
ಸೌಹಾರ್ದತೆಗೆ ಸಾಕ್ಷಿಯಾದ ಮೆರವಣಿಗೆ
ಮೆರವಣಿಗೆ ಸಾಗುವ ಸಂದರ್ಭದಲ್ಲಿ ಸ್ಥಳೀಯ ಮುಸ್ಲಿಂ ಸಮುದಾಯದವರು ಸಹಕರಿಸಿ ಶಾಂತಿಯುತವಾಗಿ ಮೆರವಣಿಗೆ ಸಾಗಲು ನೆರವಾದರು. ಪರಸ್ಪರ ಸಹಕಾರ ಹಾಗೂ ಸಹಬಾಳ್ವೆಯ ಸಂದೇಶ ಸಾರಿದ ಈ ನಡೆ ಉತ್ಸವದ ವಿಶೇಷ ಗಮನಾರ್ಹ ಅಂಶವಾಗಿತ್ತು.
ಬಳಿಕ ತೂದಳ್ಳಿ ಸಮುದ್ರ ತೀರದಲ್ಲಿ ಗಣೇಶನ ವಿಗ್ರಹವನ್ನು ಭಕ್ತಿಭಾವದಿಂದ ವಿಸರ್ಜಿಸಲಾಯಿತು. ಬೆಳ್ಳಿ ಮಹೋತ್ಸವದ ಅಂಗವಾಗಿ ನಡೆದ ಐದು ದಿನಗಳ ಗಣೇಶೋತ್ಸವವು ಭಕ್ತಿ, ವೈಭವ ಹಾಗೂ ಸೌಹಾರ್ದತೆಯೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು.
ಪೊಲೀಸ್ ಬಂದೋಬಸ್ತ್
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಹಾಗೂ ಎಎಸ್‌ಪಿ ರಾನು ಗುಪ್ತ ಅವರ ಮಾರ್ಗದರ್ಶನದಲ್ಲಿ ಉತ್ಸವಕ್ಕೆ ಸೂಕ್ತ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಸಿಪಿಐ ಜಗದೀಶ ಹಂಚನಾಳ ಹಾಗೂ ಪಿಎಸ್‌ಐ ಹಣಮಂತ ಬಿರಾದಾರ ಅವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
Kshetra Samachara
19/09/2026 08:45 pm