ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಟ್ಕಳ : ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ: ಇಬ್ಬರು ವಶಕ್ಕೆ, ಠಾಣೆಗೆ ಆಗಮಿಸಿ ಪ್ರತಿಭಟನೆ

ಭಟ್ಕಳ : ಗಣೇಶೋತ್ಸವ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಹಿಂದೂ ಮುಖಂಡರು ಹಾಗೂ ತಲಾಂದ ನಿವಾಸಿಗಳು ಗುರುವಾರ ನಗರ ಪೊಲೀಸ್ ಠಾಣೆಗೆ ಆಗಮಿಸಿ ಪ್ರತಿಭಟನೆ ನಡೆಸಿದರು.

ತಲಾಂದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ರಾಜು ಸಂಕಪ್ಪ ನಾಯ್ಕ ನೀಡಿರುವ ದೂರಿನ ಪ್ರಕಾರ, ಬುಧವಾರ ಗಣೇಶ ವಿಗ್ರಹದ ವಿಸರ್ಜನಾ ಮೆರವಣಿಗೆ ಗುಳಮಿ ರೈಲ್ವೆ ನಿಲ್ದಾಣ ರಸ್ತೆಯತ್ತ ಸಾಗುತ್ತಿದ್ದ ವೇಳೆ ರಾಮಚಂದ್ರ ನಾಯ್ಕ ಅವರಿಗೆ ಸೇರಿದ ಕಟ್ಟಡದ ಮೇಲಿನಿಂದ ಅಪರಿಚಿತರು ಗಣೇಶ ವಿಗ್ರಹದತ್ತ ಕಲ್ಲುಗಳನ್ನು ತೂರಿದ್ದಾರೆ. ಇದರಿಂದ ಮೆರವಣಿಗೆಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಪ್ರಯತ್ನ ನಡೆದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದು, ಅವರು ನಿರಪರಾಧಿಗಳಾಗಿದ್ದು, ಪ್ರಕರಣದಲ್ಲಿ ಯಾವುದೇ ಪಾತ್ರವಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಎಸ್ಪಿ ನೇತೃತ್ವದಲ್ಲಿ ಮಾತುಕತೆ

ಪ್ರತಿಭಟನೆಯ ಸಂದರ್ಭದಲ್ಲಿ ಹಿಂದೂ ಮುಖಂಡರು ಹಾಗೂ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರ ನಡುವೆ ಮಾತುಕತೆ ನಡೆಯಿತು. ಪ್ರಕರಣದ ತನಿಖೆ ಮುಂದುವರಿದಿದ್ದು, ಘಟನೆಯಲ್ಲಿ ಭಾಗಿಯಾಗಿರುವ ನಿಜವಾದ ಆರೋಪಿಗಳನ್ನು ತನಿಖೆಯ ಮೂಲಕ ಪತ್ತೆಹಚ್ಚಲಾಗುವುದು ಎಂದು ಎಸ್ಪಿ ತಿಳಿಸಿದರು.

ತನಿಖೆಯ ಸಂದರ್ಭದಲ್ಲಿ ನಿರಪರಾಧಿಗಳಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.

ಆರೋಪಿತರ ಪತ್ತೆಗೆ ಮೂರು ವಿಶೇಷ ತಂಡ

ಪ್ರಕರಣದ ಆರೋಪಿತರ ಪತ್ತೆಗಾಗಿ ಭಟ್ಕಳ ಎಎಸ್ಪಿ ಅವರ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರನ್ನು ಒಳಗೊಂಡಂತೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ. ಆರೋಪಿತರ ಪತ್ತೆಗೆ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಎಸ್ಪಿ ದೀಪನ್ ಎಂ.ಎನ್. ತಿಳಿಸಿದ್ದಾರೆ.

ಘಟನೆಯ ಹಿನ್ನೆಲೆಯಲ್ಲಿ ಪಶ್ಚಿಮ ವಲಯ ಐಜಿಪಿ ಆರ್. ಚೇತನ್ ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಘಟನೆಯ ಕುರಿತು ಮಾಹಿತಿ ಪಡೆದು, ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.

ಪರಿಸ್ಥಿತಿ ಶಾಂತಿಯುತ

ಪ್ರಸ್ತುತ ಭಟ್ಕಳದಲ್ಲಿ ಪರಿಸ್ಥಿತಿ ಶಾಂತಿಯುತವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ಬಳಿಕ ಪೊಲೀಸ್ ಠಾಣೆಯಲ್ಲಿ ಸೇರಿದ್ದ ಜನರಿಗೆ ಪ್ರಕರಣ ದಾಖಲಿಸಿರುವ ಕುರಿತು ಪೊಲೀಸರು ಮಾಹಿತಿ ನೀಡಿದರು. ಪೊಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಹಿಂದೂ ಮುಖಂಡರು ಹಾಗೂ ತಲಾಂದ ನಿವಾಸಿಗಳು ಶಾಂತಿಯುತವಾಗಿ ಠಾಣೆಯಿಂದ ತೆರಳಿದರು.

ಪ್ರಕರಣದ ತನಿಖೆ ಮುಂದುವರಿದಿದ್ದು, ಕಲ್ಲು ತೂರಾಟದಲ್ಲಿ ಭಾಗಿಯಾಗಿರುವ ಆರೋಪಿತರ ಪತ್ತೆಗೆ ಮೂರು ವಿಶೇಷ ಪೊಲೀಸ್ ತಂಡಗಳು ಕ್ರಮ ಕೈಗೊಂಡಿವೆ.

Edited By : Vinayak Patil
PublicNext

PublicNext

17/09/2026 07:42 pm

Cinque Terre

9.07 K

Cinque Terre

0

ಸಂಬಂಧಿತ ಸುದ್ದಿ