ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಸಿ : ಉತ್ತರ ಕನ್ನಡ ಜಿಲ್ಲೆ ಉತ್ತರ ಕರ್ನಾಟಕದ ವ್ಯಾಪ್ತಿಯಲ್ಲೇ ಇರಬೇಕು - ಬಿ.ಡಿ. ಹಿರೇಮಠ

ಶಿರಸಿ : ಉತ್ತರ ಕನ್ನಡ ಜಿಲ್ಲೆಯನ್ನು ಧಾರವಾಡ ಹೈಕೋರ್ಟ್ ಪೀಠದ ವ್ಯಾಪ್ತಿಯಿಂದ ತೆಗೆದು ಪ್ರಸ್ತಾಪಿತ ಮಂಗಳೂರು ಪೀಠದ ವ್ಯಾಪ್ತಿಗೆ ಸೇರಿಸುವುದನ್ನು ವಿರೋಧಿಸಿ ಶಿರಸಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ನಗರದ ಡಾ. ಅಂಬೇಡ್ಕರ್ ಸಭಾಭವನದಲ್ಲಿ ವಕೀಲರ ಸಂಘ, ಉತ್ತರ ಕನ್ನಡ ಜಿಲ್ಲಾ ವಕೀಲರ ಸಂಘ ಹಾಗೂ ವಿವಿಧ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ಆಯೋಜಿಸಿದ್ದ ಸತ್ಯಾಗ್ರಹ ಹಾಗೂ ಬೃಹತ್ ಚಳವಳಿಗೆ ಚಾಲನೆ ನೀಡಿ ಧಾರವಾಡ ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಬಿ.ಡಿ. ಹಿರೇಮಠ ಮಾತನಾಡಿದರು.

ಮಂಗಳೂರು ಪೀಠ ಸ್ಥಾಪನೆಗೆ ತಮ್ಮ ವಿರೋಧವಿಲ್ಲ. ಆದರೆ ಉತ್ತರ ಕರ್ನಾಟಕದ ಭಾಗವಾಗಿರುವ ಉತ್ತರ ಕನ್ನಡ ಜಿಲ್ಲೆಯನ್ನು ಮಂಗಳೂರು ಪೀಠದ ವ್ಯಾಪ್ತಿಗೆ ಸೇರಿಸುವ ಪ್ರಸ್ತಾವನೆಗೆ ವಿರೋಧವಿದೆ ಎಂದು ಅವರು ಸ್ಪಷ್ಟಪಡಿಸಿದರು.

ಪೀಠ ಸ್ಥಾಪನೆಗೆ ಸಂಬಂಧಿಸಿದಂತೆ ಯಶವಂತ್ ಸಿಂಗ್ ಆಯೋಗದ ಶಿಫಾರಸುಗಳಲ್ಲಿರುವ ಮಾನದಂಡಗಳನ್ನು ಪರಿಗಣಿಸಬೇಕು. ಅವುಗಳನ್ನು ಕಡೆಗಣಿಸಿ ಉತ್ತರ ಕನ್ನಡ ಜಿಲ್ಲೆಯನ್ನು ಮಂಗಳೂರು ಪೀಠದ ವ್ಯಾಪ್ತಿಗೆ ಸೇರಿಸಿದರೆ ಉತ್ತರ ಕರ್ನಾಟಕದಲ್ಲಿ ತೀವ್ರ ವಿರೋಧ ವ್ಯಕ್ತವಾಗಲಿದೆ ಎಂದು ಎಚ್ಚರಿಸಿದರು.

ಕಡಿಮೆ ವೆಚ್ಚದಲ್ಲಿ ಬಡವರ ಮನೆ ಬಾಗಿಲಿಗೆ ನ್ಯಾಯ ದೊರೆಯಬೇಕು ಎಂಬ ಉದ್ದೇಶದಿಂದ ಉತ್ತರ ಕನ್ನಡ ಜಿಲ್ಲೆಯನ್ನು ಉತ್ತರ ಕರ್ನಾಟಕದ ವ್ಯಾಪ್ತಿಯಲ್ಲೇ ಉಳಿಸಬೇಕು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ಇತರ ನ್ಯಾಯಮೂರ್ತಿಗಳಿಗೆ ಮನವಿ ಮಾಡಿದರು.

ಪ್ರತಿಭಟನೆಯ ಅಂಗವಾಗಿ ನಗರದ ಅಂಚೆ ವೃತ್ತದಿಂದ ವಕೀಲರು, ಸಾರ್ವಜನಿಕರು, ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಹಾಗೂ ವಿದ್ಯಾರ್ಥಿಗಳು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಘೋಷಣೆಗಳನ್ನು ಕೂಗಿದರು.

ಹೈಕೋರ್ಟ್ ನ್ಯಾಯವಾದಿ ಎ.ಪಿ. ಹೆಗಡೆ ಜಾನ್ಮನೆ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಗೆ ಹಿಂದಿನಿಂದಲೂ ಅನ್ಯಾಯವಾಗುತ್ತಿದ್ದು, ಜಿಲ್ಲೆಯ ಹಿತಕ್ಕೆ ವಿರುದ್ಧವಾದ ನಿರ್ಧಾರಗಳ ವಿರುದ್ಧ ಪ್ರಬಲವಾಗಿ ಧ್ವನಿ ಎತ್ತುವ ಅಗತ್ಯವಿದೆ ಎಂದರು.

ಕಾರವಾರ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ನಾಗರಾಜ ನಾಯಕ್, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಉಪೇಂದ್ರ ಪೈ, ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷೆ ಉಷಾ ಹೆಗಡೆ ಹಾಗೂ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ್ ಗೌಡ ಸೇರಿದಂತೆ ಹಲವರು ಉತ್ತರ ಕನ್ನಡ ಜಿಲ್ಲೆಯನ್ನು ಉತ್ತರ ಕರ್ನಾಟಕದ ವ್ಯಾಪ್ತಿಯಲ್ಲೇ ಉಳಿಸುವಂತೆ ಆಗ್ರಹಿಸಿದರು.

ತಹಸೀಲ್ದಾರ್ ಪುಟ್ಟರಾಜ ಗೌಡ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

Edited By : PublicNext Desk
Kshetra Samachara

Kshetra Samachara

11/09/2026 06:42 pm

Cinque Terre

4.1 K

Cinque Terre

0

ಸಂಬಂಧಿತ ಸುದ್ದಿ