ಬೆಂಗಳೂರು: ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಫಾರ್ಮ್‌ಹೌಸ್‌ನಲ್ಲಿ ಪತ್ತೆಯಾದ ಫೇಕ್ ಮೆಡಿಸಿನ್ ಜಾಲದ ಬೆನ್ನು ಬಿದ್ದಿರುವ ಎಸ್ಐಟಿ ಮೆಗಾ ರೇಡ್ ನಡೆಸಿದೆ. ಬೆಂಗಳೂರು ಮಾತ್ರವಲ್ಲದೆ 6 ರಾಜ್ಯದಲ್ಲಿ ವ್ಯಾಪಿಸಿರೋ ವ್ಯವಸ್ಥಿತ ನೆಟವರ್ಕ್ ಮೇಲೆ ಏಕಾಏಲಕ್ಕೆ ದಾಳಿ ಮಾಡಿದೆ. ಬರೊಬ್ಬರಿ 9 ಕಡೆ ನಡೆದ ಸರ್ಚ್ ಆಪರೇಷನ್‌ನಲ್ಲಿ ಎಸ್.ಐ.ಟಿ ಅಧಿಕಾರಿಗಳ ಜೊತೆ ಔಷಧ ನಿಯಂತ್ರಣ ಇಲಾಖೆ ಕೈ ಜೋಡಿಸಿದೆ.
ಜನರ ಜೀವ ಉಳಿಸೋ ಔಷಧಿಗಳೇ ಜೀವ ತೆಗೆಯುತ್ತಿವೆ. ದುಡ್ಡಿನ ಆಸೆಗೆ ರೋಗಿಗಳ ಜೀವದ ಜೊತೆ ಚಲ್ಲಾಟವಾಡುತ್ತಿರುವ ಈ ನಕಲಿ ಔಷಧಿ ಮಾಫಿಯಾದ ಹಿಂದೆ ಎಸ್.ಐ.ಟಿ ದೇಶ ವ್ಯಾಪ್ತಿ ಹಬ್ಬಿರೋ ಈ ದುಷ್ಟರ ಜನ್ಮ ಜಾಲಾಡ್ತಿದೆ. ನಕಲಿ ಮೆಡಿಸಿನ್ ಜಾಲದ ನೆಟವರ್ಕ್ ಹಿಂದೆ ಹೊರಟ ಅಧಿಕಾರಿಗಳಿಗೆ 6 ರಾಜ್ಯಗಳ ಲಿಂಕ್ ಸಿಕ್ಕಿದೆ. 6 ರಾಜ್ಯದ ಹತ್ತು ಸ್ಥಳಗಳಲ್ಲಿ ಎಸ್.ಐ.ಟಿ ಏಕಾಕಾಲಕ್ಕೆ ಇವತ್ತು ಬೃಹತ್ ರೇಡ್ ನಡೆಸಿದ್ದಾರೆ.
ನಕಲಿ ಮೆಡಿಸನ್ ಜಾಲದ ಕಿಂಗ್ ಪಿನ್ ಪ್ರಶಾಂತ್‌ಗೆ ರೇಡ್ ಆದ ಹತ್ತು ಕಡೆಯಲ್ಲಿ ಲಿಂಕ್ ಇತ್ತು. ಒಂದೊಂದು ಸ್ಥಳದಿಂದ ಒಂದೊಂದು ರೀತಿಯ ಔಷಧಗಳನ್ನು ಆಮದು ಮಾಡೋದು, ಆಸ್ಪತ್ರೆಗೆ ತಲುಪಿಸೋದು, ಜೊತೆಗೆ ಸಂಗ್ರಹಿಸಿ ಇಡೋದನ್ನ ಮಾಡ್ತಾ ಇದ್ರಂತೆ. ಅಲ್ಲದೆ ಈ ಪ್ರಶಾಂತ್ ಜೊತೆ ಲಿಂಕ್ ಹೊದ್ದಿದ್ದ, ಬೆಂಗಳೂರಿನ ಮೆಡಿಸಿನ್ ಸಫ್ಲೈ ಕಂಪನಿಯೊಂದರ ಮೇಲೂ ಎಸ್.ಐ.ಟಿ ರೇಡ್ ಮಾಡಿದ್ದಾರೆ.
ಬೆಂಗಳೂರಿನ ಮಿನರ್ವ ಸರ್ಕಲ್‌ನಲ್ಲಿರುವ ಕೃಪಾ ಹೆಲ್ತ್ ಕೇರ್ ಕಂಪನಿಯ ಗೋಡೌನ್ ಮೇಲೆ ಎಸ್.ಐ.ಟಿ ದಾಳಿ ಮಾಡಿದೆ. ವಿರೇಶ್ ಕುಮಾರ್ ಎಂಬಾತನಿಗೆ ಸೇರಿದ ಈ ಕಂಪನಿ ಮೂಲಕ ಪ್ರತಿಷ್ಠಿತ ಆಸ್ಪತ್ರೆಗಳಿಗೆ ಮೆಡಿಸಿನ್ ಸಪ್ಲೈ ಮಾಡಲಾಗ್ತಾ ಇತ್ತು. 2021ರಲ್ಲಿ ಈ ಕೃಪಾ ಹೆಲ್ತ್‌ಕೇರ್ ಕಂಪನಿಯನ್ನು ನೋಂದಣಿ ಮಾಡಿಸಿದ್ದ. ಬಳಿಕ ಪ್ರಶಾಂತ್ ಸೇರಿದಂತೆ ಇತರ ಡೀಲರ್‌ಗಳಿಂದ ಔಷಧಗಳನ್ನು ತರಿಸಿಕೊಂಡು, ಅವುಗಳನ್ನು ಪ್ರತಿಷ್ಠಿತ ಆಸ್ಪತ್ರೆಗಳಿಗೆ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಪೂರೈಸಲಾಗುತ್ತಿತ್ತು ಎಂಬ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಮುಂಬೈ, ಗುಜರಾತ್, ದೆಹಲಿ, ಸೇರಿದಂತೆ ಇತರ ರಾಜ್ಯಗಳಿಗೂ ಔಷಧಗಳನ್ನು ಸರಬರಾಜು ಮಾಡಲಾಗುತ್ತಿತ್ತಂತೆ. ಆಸ್ಪತ್ರೆಗಳಿಂದ ಔಷಧ ಅರ್ಡರ್ ತರ್ತಿದ್ದ ಮೆಡಿಕಲ್ ರೆಪ್ರೆಸೆಂಟೇಟಿವ್‌ಗಳಿಗೆ ಹೆಚ್ಚಿನ ಕಮಿಷನ್ ನೀಡ್ತಾ ಇದ್ದನಂತೆ. ಈ ಕಂಪನಿಯಲ್ಲಿ 15ಕ್ಕೂ ಹೆಚ್ಚು ಮೆಡಿಕಲ್ ರೆಪ್ರೆಸೆಂಟೇಟಿವ್‌ಗಳು ಕೆಲಸ ಮಾಡುತ್ತಿದ್ದರು ಎಂಬುದೂ ಗೊತ್ತಾಗಿದೆ. ಇಲ್ಲಿ ಪ್ರಮುಖವಾಗಿ ಕ್ಯಾನ್ಸರ್ ಔಷಧಗಳನ್ನು ಆಸ್ಪತ್ರೆಗಳಿಗೆ ಪೂರೈಕೆ ಮಾಡಲಾಗುತ್ತಿತ್ತು. ಇದರ ಜೊತೆಗೆ ಥೈರಾಯ್ಡ್ ಔಷಧಗಳು, ವಿಟಮಿನ್ ಮಾತ್ರೆಗಳು ಹಾಗೂ ವಿವಿಧ ಇಂಜೆಕ್ಷನ್‌ಗಳು ಸೇರಿ ಹಲವು ರೀತಿಯ ಔಷಧಿ ಆಸ್ಪತ್ರೆ ಹಾಗೂ ಮೆಡಿಕಲ್‌ಗೆ ಸೇರ್ತಿದ್ದವು.
ಇತರ ಡೀಲರ್‌ಗಳಿಗೆ ಹೋಲಿಸಿದರೆ ಕಡಿಮೆ ಬೆಲೆಗೆ ಔಷಧಗಳು ದೊರೆಯುತ್ತಿದ್ದ ಕಾರಣ ಕೆಲವು ಆಸ್ಪತ್ರೆಗಳು ಹಾಗೂ ಮೆಡಿಕಲ್ ಶಾಪ್‌ಗಳು ಅವುಗಳನ್ನು ಖರೀದಿಸುತ್ತಿದ್ದವಂತೆ. ಬೆಂಗಳೂರು ಮಾತ್ರವಲ್ಲದೆ ಹಿಮಾಚಲ ಪ್ರದೇಶ, ಹರಿಯಾಣ, ತಮಿಳುನಾಡಿನ ಚೆನ್ನೈ, ಮಹಾರಾಷ್ಟ್ರದ ಮುಂಬೈ ಹಾಗೂ ತೆಲಂಗಾಣದಲ್ಲಿ ಎಸ್‌ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸುಮಾರು 80ರಿಂದ 100 ಅಧಿಕಾರಿಗಳ ತಂಡ ವಿವಿಧ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ್ದಾರೆ.
PublicNext
11/09/2026 08:23 pm