ಬಳ್ಳಾರಿ : ಬಿಜೆಪಿಯ ಬಳ್ಳಾರಿ ಚಲೋ ಪಾದಯಾತ್ರೆ ಮುಗಿದ್ರೂ ಅದರಿಂದಾಗಿರೋ ಪರಿಣಾಮದ ಕತೆ ಮುಗಿದಿಲ್ಲ. ಪಾದಯಾತ್ರೆ ವೇಳೆ ನಿಯಮ ಮೀರಿ ಪ್ರತಿಭಟನೆ ಮಾಡಿದ ಹಿನ್ನೆಲೆ ಮಾಜಿ ಶಾಸಕರು ಸೇರಿದಂತೆ 22 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಬಳ್ಳಾರಿ ಚಲೋ ಪಾದಯಾತ್ರೆ ವೇಳೆ ಪಾಲಿಕೆ ವ್ಯಾಪ್ತಿಯಲ್ಲಿ ಪೂರ್ವಾನುಮತಿಯಿಲ್ಲದೆ ಬಿಜೆಪಿ ಬಾವುಟ ಹಾಗೂ ಬ್ಯಾನರ್ ಅಳವಡಿಸಲಾಗಿತ್ತು. ಕಾರ್ಯಕ್ರಮದ ಒಂದು ದಿನ ಮುಂಚೆಯೇ ಬ್ಯಾನರ್ ಮತ್ತು ಬಾವುಟವನ್ನು ಪಾಲಿಕೆ ಸಿಬ್ಬಂದಿ ತೆರವು ಮಾಡಿದ್ರು. ತೆರವುಗೊಳಿಸಿದ್ದನ್ನು ಖಂಡಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದ್ದರಿಂದ ಮಾಜಿ ಶಾಸಕ ಸೋಮಶೇಖರ ರೆಡ್ಡಿ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸೇರಿ 22 ಜನರ ವಿರುದ್ಧ ಬಳ್ಳಾರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಸೆಪ್ಟೆಂಬರ್ 9ರಂದು ಬಿಜೆಪಿ ಪಾದಯಾತ್ರೆ ಬಳ್ಳಾರಿ ನಗರಕ್ಕೆ ಆಗಮಿಸತ್ತು. ಆಗ ಪಾದಯಾತ್ರೆ ಆಗಮಿಸುವ ಕೊಳಗಲ್ಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿಐಟಿಎಂ ಕಾಲೇಜಿನವರೆಗೆ ಮಾತ್ರ ಫ್ಲ್ಯಾಗ್ ಅಳವಡಿಸಲು ಅವಕಾಶ ನೀಡಲಾಗಿತ್ತು. ಯಾವುದೇ ಕಾರಣಕ್ಕೂ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬ್ಯಾನರ್ ಕಟ್ಟದಂತೆ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ನಿಷೇಧಾಜ್ಞೆ ಆದೇಶ ಹೊರಡಿಸಿದ್ರು. ಆದ್ರೂ ನಿಯಮ ಮೀರಿ ಫ್ಲ್ಯಾಗ್, ಬ್ಯಾನರ್‌ಗಳನ್ನು ಅಳವಡಿಸಲಾಗಿತ್ತು. ನಿಯಮಬಾಹಿತವಾಗಿ ಅಳವಡಿಕೆ ಮಾಡಿದ್ದ ಬ್ಯಾನರ್ ಹಾಗೂ ಫ್ಲ್ಯಾಗ್‌ಗಳನ್ನು ಪಾಲಿಕೆ ಸಿಬ್ಬಂದಿ ತೆರವುಗೊಳಿಸಿದ್ರು. ಇದರಿಂದ ಆಕ್ರೋಶಗೊಂಡ ಬಿಜೆಪಿ ನಾಯಕರು ಸೆಪ್ಟೆಂಬರ್ 9ರಂದು ಬೆಳಗ್ಗೆ ಬಿಐಟಿಎಂ ಕಾಲೇಜು ಬಳಿ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದ್ರು. ಬಳಿಕ ಬಳ್ಳಾರಿ-ಹೊಸಪೇಟೆ ಎನ್‌ಎಚ್-67ರಲ್ಲಿ ಅನುಮತಿಯಿಲ್ಲದೆ ಕುಳಿತು ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸಿದ್ರು. ಪೊಲೀಸರು ತಿಳಿಹೇಳಿದರೂ ಕೇಳದೇ, ರಸ್ತೆ ಮೇಲೆ ಕುಳಿತು ವಾಹನಗಳನ್ನು ಅಡ್ಡಗಟ್ಟಿ ಬಿಜೆಪಿ ನಾಯಕರು ಹಾಗೂ ಮುಖಂಡರು ಪ್ರತಿಭಟನೆ ನಡೆಸಿದ್ದರು. ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಿದ ಹಿನ್ನೆಲೆ ಎಫ್‌ಐಆರ್ ದಾಖಲಿಸಲಾಗಿದೆ.
PublicNext
13/09/2026 03:39 pm