ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಳ್ಳಾರಿ : ‘ಇದೇನಾ ಜನರಿಗೆ ಕೊಡೋ ಕುಡಿಯುವ ನೀರು?’; ಬಾಟಲ್‌ನಲ್ಲಿ ಹುಳು ತಂದು ಗ್ರಾಮಸಭೆಯಲ್ಲೇ ಆಕ್ರೋಶ

ಬಳ್ಳಾರಿ : ಕುಡಿಯುವ ನೀರು ಎಂದರೆ ಆರೋಗ್ಯ ಕಾಪಾಡುವ ಜೀವಜಲ. ಆದರೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ರಾರಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನರಿಗೆ ಸಿಗುತ್ತಿರುವ ನೀರಿನಲ್ಲೇ ಹುಳುಗಳು ಪತ್ತೆಯಾಗಿವೆ ಎಂಬ ಆರೋಪ ಕೇಳಿಬಂದಿದೆ.

ಕುಡಿಯುವ ನೀರಿನಲ್ಲಿ ಹುಳುಗಳು ಪತ್ತೆಯಾಗಿರುವುದನ್ನು ಬಾಟಲ್‌ನಲ್ಲಿ ತಂದು ಗ್ರಾಮಸಭೆಯಲ್ಲೇ ಪ್ರದರ್ಶಿಸಿದ ಗ್ರಾಮಸ್ಥರು, “ಇದೇನಾ ಜನರಿಗೆ ಪೂರೈಕೆ ಮಾಡುತ್ತಿರುವ ಕುಡಿಯುವ ನೀರು?” ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ರಾರಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾರಾವಿ, ತೊಂಡೆಹಾಳು, ಟಿ.ರಾಂಪುರ ಹಾಗೂ ಕುರುವಳ್ಳಿ ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಕೆರೆಯ ಮೂಲಕ ಪ್ರತಿದಿನ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ಇದೇ ನೀರಿನಲ್ಲಿ ಪದೇಪದೇ ಹುಳುಗಳು ಪತ್ತೆಯಾಗುತ್ತಿದ್ದು, ಶುದ್ಧ ಕುಡಿಯುವ ನೀರಿಗಾಗಿ ಜನರು ಪರದಾಡುವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ಕುರಿತು ಗ್ರಾಮ ಪಂಚಾಯಿತಿ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದರೂ ಸಮಸ್ಯೆ ಬಗೆಹರಿದಿಲ್ಲ ಎನ್ನುವುದು ಗ್ರಾಮಸ್ಥರ ಅಳಲು. ಶುದ್ಧ ನೀರು ಬೇಕಾದರೆ ಖಾಸಗಿ ಆರ್‌ಒ ಪ್ಲಾಂಟ್‌ಗಳಿಗೆ ಹಣ ನೀಡಿ ನೀರು ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ರಾಹುಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ವೇಳೆ ಗ್ರಾಮಸಭೆ ನೋಡಲ್ ಅಧಿಕಾರಿ ತಮ್ಮನಗೌಡ ಪಾಟೀಲ್ ಅವರಿಗೂ ಗ್ರಾಮಸ್ಥರು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

ಕುಡಿಯುವ ನೀರಿನಲ್ಲೇ ಹುಳುಗಳು ಪತ್ತೆಯಾಗುತ್ತಿದ್ದರೆ, ಜನರ ಆರೋಗ್ಯದ ಹೊಣೆ ಯಾರದ್ದು?

ದೂರು ನೀಡಿದರೂ ಸಮಸ್ಯೆ ಬಗೆಹರಿಯದಿರುವುದಕ್ಕೆ ಕಾರಣವೇನು?

ರಾರಾವಿ ಸೇರಿದಂತೆ ನಾಲ್ಕು ಗ್ರಾಮಗಳಿಗೆ ಹುಳಮುಕ್ತ ಹಾಗೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವುದು ಯಾವಾಗ?

ಎಂಬ ಪ್ರಶ್ನೆಗಳನ್ನು ಗ್ರಾಮಸ್ಥರು ಅಧಿಕಾರಿಗಳ ಮುಂದಿಟ್ಟಿದ್ದಾರೆ.

ಇದೀಗ ಗ್ರಾಮಸ್ಥರ ಆರೋಪಗಳಿಗೆ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ? ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

Edited By :
PublicNext

PublicNext

17/09/2026 11:33 am

Cinque Terre

11.45 K

Cinque Terre

0

ಸಂಬಂಧಿತ ಸುದ್ದಿ