ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಳ್ಳಾರಿ: ​ಗಣಿನಾಡಿನಲ್ಲಿ ಕಳೆಗಟ್ಟಿದ ಗಣೇಶೋತ್ಸವ; ಇಂದು ಗಣಪತಿಗೆ 3ನೇ ದಿನದ ಪೂಜಾ ವೈಭವ

ಬಳ್ಳಾರಿ:ಗಣಿನಾಡು ಬಳ್ಳಾರಿ ನಗರದಲ್ಲಿ ಗಣಪತಿ ಹಬ್ಬದ ಸಂಭ್ರಮ ಹಾಗೂ ಕಳೆ ಮತ್ತಷ್ಟು ಹೆಚ್ಚಾಗಿದೆ. ಗಣಪತಿ ಪ್ರತಿಷ್ಠಾಪನೆಯಾಗಿ ಇಂದು ಮೂರನೇ ದಿನವಾಗಿದ್ದು, ನಗರದ ವಿವಿಧೆಡೆ ಪ್ರತಿಷ್ಠಾಪಿಸಲಾಗಿರುವ ಬಗೆಬಗೆಯ ಮೂರ್ತಿಗಳ ದರ್ಶನಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಎಲ್ಲೆಡೆ ಭಕ್ತಿ ಹಾಗೂ ಉತ್ಸಾಹದ ವಾತಾವರಣ ನಿರ್ಮಾಣವಾಗಿದೆ.

​ವಿವಿಧ ಮಂಟಪಗಳಲ್ಲಿ ಬೆಳಗಿನಿಂದಲೇ ವಿಶೇಷ ಪೂಜೆ, ಅಭಿಷೇಕ ಹಾಗೂ ಧಾರ್ಮಿಕ ವಿಧಿವಿಧಾನಗಳು ಸಾಂಗವಾಗಿ ನೆರವೇರುತ್ತಿವೆ. ನಗರದ ಪ್ರಮುಖ ರಸ್ತೆಗಳು, ಬಡಾವಣೆಗಳು, ವೃತ್ತಗಳು ಹಾಗೂ ಮಾರುಕಟ್ಟೆ ಪ್ರದೇಶಗಳಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳು ಜಗಮಗಿಸುವ ಅಲಂಕಾರಗಳಿಂದ ಭಕ್ತರ ಗಮನ ಸೆಳೆಯುತ್ತಿವೆ.

​ಬೃಹತ್ ಗಾತ್ರದ ಮೂರ್ತಿಗಳಿಂದ ಹಿಡಿದು ಸಾಂಪ್ರದಾಯಿಕ, ಕಲಾತ್ಮಕ ಹಾಗೂ ವಿಭಿನ್ನ ಪರಿಕಲ್ಪನೆಯ ಗಣಪತಿ ಮೂರ್ತಿಗಳನ್ನು ವಿಜೃಂಭಣೆಯಿಂದ ಪ್ರತಿಷ್ಠಾಪಿಸಲಾಗಿದೆ. ಗಣಪತಿ ಮಂಟಪಗಳು ವಿದ್ಯುತ್ ದೀಪಾಲಂಕಾರ, ಮನಮೋಹಕ ಹೂವಿನ ಅಲಂಕಾರಗಳಿಂದ ಕಂಗೊಳಿಸುತ್ತಿದ್ದು, ರಾತ್ರಿ ವೇಳೆಯಲ್ಲಿ ಈ ಮಂಟಪಗಳ ಸೌಂದರ್ಯ ಮತ್ತಷ್ಟು ದ್ವಿಗುಣಗೊಳ್ಳುತ್ತಿದೆ.

​ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಗಣೇಶನಿಗೆ ವಿಶೇಷ ಪೂಜೆ ಹಾಗೂ ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಭಕ್ತರು ಕುಟುಂಬ ಸಮೇತರಾಗಿ ಆಗಮಿಸಿ ವಿಘ್ನನಿವಾರಕನ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.

​ಎಲ್ಲೆಡೆ ಮೊಳಗುತ್ತಿರುವ ಗಣಪತಿಯ ನಾಮಸ್ಮರಣೆ, ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುವ ಮಂಟಪಗಳು ಹಾಗೂ ಭಕ್ತರ ಅದ್ಧೂರಿ ಸಂಭ್ರಮದಿಂದ ಗಣಿನಾಡು ಬಳ್ಳಾರಿಯಲ್ಲಿ ಹಬ್ಬದ ಸಂಭ್ರಮ-ಸಡಗರ ಕಳೆಗಟ್ಟಿದೆ.

​ವರದಿ: ಹೊನ್ನುರಸ್ವಾಮಿ ಕೆ.ಟಿ., ಪಬ್ಲಿಕ್ ನೆಕ್ಸ್ಟ್, ಬಳ್ಳಾರಿ

Edited By : Somashekar
PublicNext

PublicNext

16/09/2026 11:40 pm

Cinque Terre

5.39 K

Cinque Terre

0

ಸಂಬಂಧಿತ ಸುದ್ದಿ