ಶಿವಮೊಗ್ಗ : ಜಿಲ್ಲೆಯ ಹೊಸನಗರ ತಾಲೂಕಿನ ಕೋಡೂರು ಗ್ರಾಮದಲ್ಲಿ ಆಕಸ್ಮಿಕವಾಗಿ ಸಂಭವಿಸಿದ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮನೆ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿರುವ ಘಟನೆ ನಡೆದಿದೆ. ಕೋಡೂರಿನ ಕೀಳಂಬಿ ರಸ್ತೆ ಬಳಿ ಇರುವ ಗಾರೆ ಕೆಲಸ ಮಾಡುವ ಸಂಜು ಎಂಬುವವರಿಗೆ ಸೇರಿದ ಮನೆಯಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ.
ಕಳೆದ ರಾತ್ರಿ ಸುಮಾರು 8 ಗಂಟೆಯ ವೇಳೆಗೆ ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ನೋಡನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಇಡೀ ಮನೆಗೆ ಹಬ್ಬಿದ್ದು, ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳು, ಗೃಹೋಪಯೋಗಿ ಸಾಮಗ್ರಿಗಳು ಹಾಗೂ ಧಾನ್ಯಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಈ ದುರಂತದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಅವಘಡ ಸಂಭವಿಸಿದ ಸಮಯದಲ್ಲಿ ಮನೆಯವರೆಲ್ಲರೂ ಗ್ರಾಮದಲ್ಲಿದ್ದ ಗಣೇಶೋತ್ಸವ ಕಾರ್ಯಕ್ರಮಕ್ಕೆ ತೆರಳಿದ್ದರು. ಹೀಗಾಗಿ ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅದೃಷ್ಟವಶಾತ್ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಹೊಸನಗರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಹರಸಾಹಸ ಪಟ್ಟು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೆಚ್ಚಿನ ಅಪಾಯ ತಪ್ಪಿಸುವ ಮುನ್ನೆಚ್ಚರಿಕಾ ಕ್ರಮವಾಗಿ ಕೋಡೂರು ವ್ಯಾಪ್ತಿಯಲ್ಲಿ ಕೆಲಕಾಲ ವಿದ್ಯುತ್ ಪೂರೈಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು.
PublicNext
16/09/2026 11:11 am
LOADING...