ಶಿವಮೊಗ್ಗ : ಕಸ್ತೂರಿರಂಗನ್ ವರದಿಯನ್ನು ಸಂಪೂರ್ಣವಾಗಿ ರದ್ದು ಪಡಿಸಬೇಕು. ಮಲೆನಾಡಿನ ಜನರ ಬದುಕು ಮತ್ತು ಅಭಿವೃದ್ಧಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಒತ್ತಾಯಿಸಿದರು.
ತೀರ್ಥಹಳ್ಳಿಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಸ್ತೂರಿರಂಗನ್ ಯೋಜನೆಗೆ ವಿದೇಶದಿಂದ ಹಣ ಬರುತ್ತಿದೆ ಎಂಬ ಆರೋಪಗಳಿವೆ. ಈ ಕುರಿತು ಸಮಗ್ರ ತನಿಖೆ ನಡೆಸಬೇಕಿದೆ. ವರದಿ ವಿಚಾರದಲ್ಲಿ ರಾಜಕೀಯ ಮಾಡದೆ, ಪಕ್ಷಾತೀತವಾಗಿ ಎಲ್ಲರೂ ಒಗ್ಗೂಡಿ ವಿರೋಧಿಸಬೇಕು ಎಂದರು.
ಯೋಜನೆ ಸಂಪೂರ್ಣ ರದ್ದಾದರೆ ಮಾತ್ರ ಮಲೆನಾಡಿನ ಜನರು ನೆಮ್ಮದಿಯಿಂದ ಬದುಕಲು ಸಾಧ್ಯ. ಸುಪ್ರೀಂ ಕೋರ್ಟ್ ಅಥವಾ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ತೀರ್ಪು ನೀಡಬಹುದು. ಆದರೆ, ಅದರ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕಾದದ್ದು ಸರ್ಕಾರ. ಮುಖ್ಯಮಂತ್ರಿ ಅವರಿಗೆ ಮನವಿ ಮಾಡುತ್ತಿದ್ದು, ಕೇಂದ್ರ ಸರ್ಕಾರದಿಂದ ಒಂದು ವರ್ಷದ ಕಾಲಾವಕಾಶ ಪಡೆದು ಬಳಿಕ ಜಂಟಿ ಸರ್ವೇ ನಡೆಸಿ ವಾಸ್ತವ ಸ್ಥಿತಿಯನ್ನು ತಿಳಿಯಬೇಕು ಎಂದು ಹೇಳಿದರು.
ಕೆಲವೆಡೆ ರೈತರಿಗೆ ಹಕ್ಕುಪತ್ರ ನೀಡಿದ ಬಳಿಕವೂ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸುವ ಕೆಲಸ ಮಾಡುತ್ತಿದ್ದಾರೆ. ಹಕ್ಕುಪತ್ರ ನೀಡಿದ ಬಳಿಕ ಡಿನೋಟಿಫಿಕೇಷನ್ ಮಾಡಬೇಕು. ಮಲೆನಾಡಿನ ಜನರು ಏನನ್ನೂ ಮಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲೂ ಕೇಂದ್ರ ಸರ್ಕಾರದ ಅನುಮತಿ ಪಡೆಯಬೇಕಾಗಿದೆ ಎಂದರು.
ಯಾರಾದರೂ ಮೃತಪಟ್ಟರೆ ಅಂತ್ಯಕ್ರಿಯೆ ನಡೆಸಲು ಜಾಗದ ಸಮಸ್ಯೆ ಎದುರಾಗುವ ಪರಿಸ್ಥಿತಿ ಇದೆ. ಮಲೆನಾಡಿನ ಜನರನ್ನು ಸರ್ಕಾರ ಈ ಸಂಕಷ್ಟದಿಂದ ಪಾರು ಮಾಡಬೇಕು. ಈ ಸಮಸ್ಯೆಗೆ ಸರ್ಕಾರ ಇತಿಶ್ರೀ ಹಾಡಿ, ಮಲೆನಾಡಿಗರು ಶಾಶ್ವತವಾಗಿ ಬದುಕಲು ಅನುಕೂಲವಾಗುವ ಪರಿಹಾರ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಅಡಿಕೆ ಬೆಲೆ ಹೆಚ್ಚಳಕ್ಕೆ ಕ್ರಮ ವಹಿಸಿ
ಗುಟ್ಕಾ ನಿಷೇಧದ ವಿಚಾರದಲ್ಲಿ ಜನರಲ್ಲಿ ಗೊಂದಲ ಉಂಟಾಗಿದೆ. ಗುಟ್ಕಾ ನಿಷೇಧಿಸುವುದಿಲ್ಲ ಎಂದು ಸರ್ಕಾರ ಸ್ಪಷ್ಟವಾಗಿ ತಿಳಿಸಿದರೆ ಅಡಿಕೆ ಬೆಲೆ ಹೆಚ್ಚಳಕ್ಕೆ ಅನುಕೂಲವಾಗಬಹುದು. ಈ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಆರಗ ಜ್ಞಾನೇಂದ್ರ ಮನವಿ ಮಾಡಿದರು.
PublicNext
19/09/2026 11:19 pm
LOADING...