ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಗರ: ಸಾರ್ವಜನಿಕ ಉದ್ದೇಶದ ನಿವೇಶನಗಳ ರಕ್ಷಣೆಗೆ ತೀ ಶ್ರೀನಿವಾಸ್ ಆಗ್ರಹ – ಅಕ್ರಮಗಳ ವಿರುದ್ಧ ಹೋರಾಟದ ಎಚ್ಚರಿಕೆ

ಸಾಗರ:ನಗರಸಭೆ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ಸಾರ್ವಜನಿಕ ಉದ್ದೇಶಗಳಿಗಾಗಿ ಮೀಸಲಿಟ್ಟಿರುವ ಸಿಎ (Civic Amenity) ನಿವೇಶನಗಳು ಒತ್ತುವರಿಯಾಗುತ್ತಿದ್ದು, ನಗರಸಭೆ ಆಡಳಿತ ಮತ್ತು ಜಿಲ್ಲಾಡಳಿತ ತಕ್ಷಣವೇ ಇವುಗಳಿಗೆ ಬೇಲಿ ಅಳವಡಿಸಿ ಫಲಕ ಹಾಕಿ ರಕ್ಷಣೆ ಒದಗಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ತೀ ಶ್ರೀನಿವಾಸ್ ಒತ್ತಾಯಿಸಿದ್ದಾರೆ. ಸಾಗರ ನಗರದಲ್ಲಿ ಸುಮಾರು 125 ಲೇಔಟ್‌ಗಳಿದ್ದು, ಇವುಗಳಲ್ಲಿ ಸುಮಾರು 125ಕ್ಕೂ ಹೆಚ್ಚು ದೊಡ್ಡ ನಿವೇಶನಗಳು ಸಾರ್ವಜನಿಕ ಉದ್ದೇಶಗಳಿಗಾಗಿ ಮೀಸಲಾಗಿವೆ. ಆದರೆ ಇಂತಹ ನಿವೇಶನಗಳನ್ನು ಸರಿಯಾಗಿ ಕಾಯ್ದಿಟ್ಟುಕೊಳ್ಳದೆ ದುರುಪಯೋಗವಾಗಲು ಬಿಡಲಾಗುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಈ ಹಿಂದೆ ರಾಣಿ ಚೆನ್ನಮ್ಮ ಸರ್ಕಲ್ ಸಮೀಪ ಸೇರಿದಂತೆ ಪ್ರಮುಖ ಬಡಾವಣೆಗಳಲ್ಲಿ ಸಾರ್ವಜನಿಕ ಉದ್ದೇಶಕ್ಕೆಂದು ಬಿಟ್ಟಿದ್ದ ಜಾಗಗಳನ್ನು ನಗರಸಭೆ ಗಟ್ಟಿಯಾದ ಬೇಲಿ ಹಾಕಿ ಸಂರಕ್ಷಿಸಬೇಕಿತ್ತು ಎಂದು ಶ್ರೀನಿವಾಸ್ ಉಲ್ಲೇಖಿಸಿದರು. ತಾವು ಸತತವಾಗಿ ಮಾಹಿತಿ ಹಕ್ಕು ಕಾಯ್ದೆಯಡಿ ಹೋರಾಟ ನಡೆಸಿ ಹಾಗೂ ಮೇಲಧಿಕಾರಿಗಳ ಗಮನಕ್ಕೆ ತಂದು ಸುಮಾರು 32 ನಿವೇಶನಗಳ ಪಟ್ಟಿಯನ್ನು ಸಿದ್ಧಪಡಿಸುವಂತೆ ಮಾಡಿದ್ದಾಗಿ ತಿಳಿಸಿದರು. ಆದರೆ ಹಲವು ಸಂಘ-ಸಂಸ್ಥೆಗಳು ಮತ್ತು ಪ್ರಭಾವಿಗಳು ಈ ನಿವೇಶನಗಳನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ನಿರಂತರ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ವರದಶ್ರೀ ಸಮೀಪದ ಮೂರು ಎಕರೆ ಜಾಗದ ಪ್ರಕರಣವನ್ನು ಪ್ರಸ್ತಾಪಿಸಿದ ಅವರು, ರಾಜಕೀಯ ಪ್ರಭಾವ ಬಳಸಿ ನಿಯಮಬಾಹಿರವಾಗಿ ಖಾತೆ ಮಾಡಿಸಲು ಒತ್ತಡ ಹೇರಲಾಗಿತ್ತು ಎಂದು ಆರೋಪಿಸಿದರು. ಆಗಿನ ನಗರಸಭೆ ಆಯುಕ್ತರು ಇದು ಅಕ್ರಮವೆಂದು ಬಿಲ್ಡಿಂಗ್ ಲೈಸೆನ್ಸ್ ನೀಡಲು ನಿರಾಕರಿಸಿ, ಕಾನೂನುಬದ್ಧ ದಾಖಲೆಗಳಿಲ್ಲದೆ ಖಾತೆ ಮಾಡುವುದು ತಪ್ಪು ಎಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು. ಅಂತಹ ಆಸ್ತಿಗಳಿಗೆ ಸರಿಯಾದ ಮೇಲ್ಮನವಿ ಸಲ್ಲಿಸದೆ ನಗರಸಭೆ ಕೈಕಟ್ಟಿ ಕುಳಿತಿದ್ದರಿಂದ, ರಸ್ತೆ ವಿಸ್ತರಣೆಯ ಸಂದರ್ಭದಲ್ಲಿ ಜಾಗವೇ ಹೋಗದಿದ್ದರೂ ಕೋಟ್ಯಂತರ ರೂಪಾಯಿ ಪರಿಹಾರ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವ್ಯವಸ್ಥೆಯ ವೈಫಲ್ಯವನ್ನು ತೀವ್ರವಾಗಿ ಖಂಡಿಸಿದರು.

ಒಂದು ಕಾಲದಲ್ಲಿ ಬೆಂಗಳೂರು ವಿಭಾಗದಲ್ಲೇ ಸಾಗರ ಪುರಸಭೆಯು ತನ್ನ ಅತ್ಯುತ್ತಮ ಆಡಳಿತ ಮತ್ತು ಸ್ವಚ್ಛ ನಿರ್ವಹಣೆಗೆ ರಾಜ್ಯದಲ್ಲೇ ಪ್ರಥಮ ಸ್ಥಾನ ಗಳಿಸಿ ಮಾದರಿಯಾಗಿತ್ತು. ಆದರೆ ಕಳೆದ 15–20 ವರ್ಷಗಳಿಂದ ಪರಿಸ್ಥಿತಿ ಹದಗೆಟ್ಟಿದ್ದು, ಭ್ರಷ್ಟಾಚಾರ ಮತ್ತು ಅಕ್ರಮಗಳು ಮಿತಿಮೀರಿ ಹೋಗಿವೆ. ಸಾರ್ವಜನಿಕರ ಆಸ್ತಿಯನ್ನು ಕಬಳಿಸುತ್ತಿರುವುದರ ವಿರುದ್ಧ ಸಾರ್ವಜನಿಕರೇ ಒಗ್ಗಟ್ಟಾಗಿ ಧ್ವನಿ ಎತ್ತಬೇಕಿದೆ; ನಾಗರಿಕರು ಒಂದಾಗಿ ಸಮಗ್ರ ತನಿಖೆಗೆ ಒತ್ತಾಯಿಸಿದಾಗ ಮಾತ್ರ ನಗರದ ಅಮೂಲ್ಯ ಆಸ್ತಿಗಳನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಅವರು ಜನತೆಗೆ ಕರೆ ನೀಡಿದರು.

ಜಮೀಲ್ ಸಾಗರ್ "ಪಬ್ಲಿಕ್ ನೆಕ್ಸ್ಟ್ ಸಾಗರ"

Edited By : PublicNext Desk
Kshetra Samachara

Kshetra Samachara

19/09/2026 09:13 pm

Cinque Terre

2.04 K

Cinque Terre

0

ಸಂಬಂಧಿತ ಸುದ್ದಿ