ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಗರ : ಆರೋಪಗಳು ಆಧಾರರಹಿತ; ಸಮುದಾಯದ ಅಭಿವೃದ್ಧಿಗೆ ನಮ್ಮ ಬದ್ಧತೆ: ತಾಹಿರ್

ಸಾಗರ : ಮಜ್ಲಿಸ್-ಎ-ಮುಲ್ತಝಿಮಾ ಜಾಮಿಯಾ ಸಾಗರ ಸಮಿತಿಯು ಅಧಿಕಾರಕ್ಕೆ ಬಂದ ದಿನದಿಂದಲೂ ಸಮುದಾಯ ಮತ್ತು ವಕ್ಫ್ ಆಸ್ತಿಗಳ ರಕ್ಷಣೆಗೆ ಹಗಲಿರುಳು ಶ್ರಮಿಸುತ್ತಿದೆ ಎಂದು ಸಮಿತಿಯ ಕಾರ್ಯದರ್ಶಿ ಸೈಯದ್ ತಾಹಿರ್ ಸ್ಪಷ್ಟಪಡಿಸಿದ್ದಾರೆ.

ಸಮಿತಿಯ ಸದಸ್ಯರು ತಮ್ಮ ವೈಯಕ್ತಿಕ ವ್ಯಾಪಾರ, ವ್ಯವಹಾರಗಳನ್ನು ಬದಿಗಿಟ್ಟು ಬೆಂಗಳೂರಿನ ವಕ್ಫ್ ಬೋರ್ಡ್ ಕಚೇರಿಗಳಲ್ಲಿ ವಾರಗಟ್ಟಲೆ ಮೊಕ್ಕಾಂ ಹೂಡಿ, ಕಾನೂನು ಹೋರಾಟಗಳನ್ನು ಮುನ್ನಡೆಸುತ್ತಿದ್ದಾರೆ. ಸಮಿತಿಯ ಮೇಲೆ ಕೇಳಿಬರುತ್ತಿರುವ ಆರೋಪಗಳು ಆಧಾರರಹಿತವಾಗಿದ್ದು, ಕಳೆದ ನಾಲ್ಕು ವರ್ಷಗಳಿಂದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ರಾತ್ರಿ-ಹಗಲು ಎನ್ನದೆ ಶ್ರಮಿಸುತ್ತಿರುವುದನ್ನು ಸ್ಥಳೀಯರು ಪ್ರತ್ಯಕ್ಷವಾಗಿ ಕಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಸಮಿತಿಯು ಕೈಗೆತ್ತಿಕೊಂಡ ಪ್ರಮುಖ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರ ನೀಡಿದ ಅವರು, ಸ್ಥಳೀಯ ಕಬರಸ್ತಾನವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ತೆಂಗಿನ ಮರಗಳನ್ನು ನೆಟ್ಟು ಹಸಿರೀಕರಣ ಹಾಗೂ ಸೌಂದರ್ಯೀಕರಣಗೊಳಿಸಲಾಗಿದೆ ಎಂದರು.

ಅಲ್ಲದೆ, ಸುಮಾರು ಎರಡು ದಶಕಗಳಿಂದ ಅಕ್ರಮ ಬಳಕೆಯಲ್ಲಿದ್ದ ಯಲ್ಗಲೆ ಜಾಗದ ವಿವಾದದಲ್ಲಿ ನಿರಂತರ ಕಾನೂನು ಹೋರಾಟ ನಡೆಸಿ, ಇದೀಗ ನ್ಯಾಯಾಲಯದಿಂದ ತೆರವು ಆದೇಶ ಪಡೆಯುವಲ್ಲಿ ಸಮಿತಿ ಯಶಸ್ವಿಯಾಗಿದೆ. ಇದು ವಕ್ಫ್ ಆಸ್ತಿ ಸಂರಕ್ಷಣೆಯಲ್ಲಿ ಸಮಿತಿಯ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ವಿವರಿಸಿದರು.

ಇಷ್ಟೇ ಅಲ್ಲದೆ, ಮಸೀದಿಗೆ ಸಂಬಂಧಿಸಿದ ಆಸ್ತಿಗಳ ಬಾಡಿಗೆಯನ್ನು ನಿಯಮಾನುಸಾರ ಪರಿಷ್ಕರಿಸಿ ಹೆಚ್ಚಿಸುವ ಮೂಲಕ ಸಮಿತಿಯ ಆದಾಯ ಮೂಲವನ್ನು ಬಲಪಡಿಸಲಾಗಿದೆ. ಬಾಕಿ ಉಳಿಸಿಕೊಂಡಿರುವ ಆಸ್ತಿಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ಪ್ರಮುಖವಾಗಿ ಎಲ್‌ಐಸಿ ಕಟ್ಟಡದ ಪಕ್ಕದಲ್ಲಿರುವ ವಕ್ಫ್ ಆಸ್ತಿಯಲ್ಲಿ ಸಾಗರ ನಗರದಲ್ಲೇ ಮಾದರಿಯಾಗುವಂತಹ ಅತ್ಯಾಧುನಿಕ ಸೌಲಭ್ಯವುಳ್ಳ ಹೋಟೆಲ್ ಹಾಗೂ ಸುಸಜ್ಜಿತ ಫಂಕ್ಷನ್ ಹಾಲ್ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಇದು ವಕ್ಫ್ ಆಸ್ತಿಗಳ ಸರ್ವತೋಮುಖ ಬೆಳವಣಿಗೆಗೆ ಹೊಸ ದಿಕ್ಸೂಚಿಯಾಗಲಿದೆ ಎಂದು ತಾಹಿರ್ ಹೇಳಿದರು.

ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ವಿಮರ್ಶಿಸುವ ಹಕ್ಕಿದೆ. ಆದರೆ ಕೇವಲ ಏಕಪಕ್ಷೀಯ ಮಾತುಗಳನ್ನು ಕೇಳಿ ತೀರ್ಮಾನಕ್ಕೆ ಬರುವುದು ನ್ಯಾಯಸಮ್ಮತವಲ್ಲ ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಯಾವುದೇ ವಿಷಯದ ಬಗ್ಗೆ ಅಭಿಪ್ರಾಯ ರೂಪಿಸುವ ಮೊದಲು ಎರಡೂ ಕಡೆಗಳ ವಾಸ್ತವವನ್ನು ಆಲಿಸಿ, ಸತ್ಯಾಸತ್ಯತೆಯನ್ನು ಅರಿಯಬೇಕು. ಸಮುದಾಯಕ್ಕಾಗಿ ವರ್ಷಗಳಿಂದ ನಿಸ್ವಾರ್ಥವಾಗಿ ಶ್ರಮಿಸುತ್ತಿರುವವರ ಕಾರ್ಯವನ್ನು ಪರಿಗಣಿಸಿ, ಅನಗತ್ಯ ಗೊಂದಲಗಳಿಗೆ ಕಿವಿಗೊಡದೆ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸುವಂತೆ ಅವರು ಮನವಿ ಮಾಡಿದರು.

Edited By : PublicNext Desk
Kshetra Samachara

Kshetra Samachara

19/09/2026 08:57 pm

Cinque Terre

1.36 K

Cinque Terre

0

ಸಂಬಂಧಿತ ಸುದ್ದಿ