ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ಕಸ್ತೂರಿರಂಗನ್ ವರದಿ ವಿರೋಧ- ಮಲೆನಾಡಿಗೆ ಸಿಎಂ ಡಿಕೆಶಿ ಮೊದಲ ಭೇಟಿ

ಶಿವಮೊಗ್ಗ: ಮಲೆನಾಡಿನ ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿರುವ ಕಸ್ತೂರಿರಂಗನ್ ವರದಿ ಮತ್ತು ಕೇಂದ್ರದ 7ನೇ ಕರಡು ಅಧಿಸೂಚನೆ ವಿರೋಧದ ಬೆನ್ನಲ್ಲೇ, ಸಿಎಂ ಡಿ.ಕೆ. ಶಿವಕುಮಾರ್ ಅವರು ಪ್ರಥಮ ಬಾರಿಗೆ ಮಲೆನಾಡು ಭಾಗಕ್ಕೆ ಆಗಮಿಸುತ್ತಿದ್ದಾರೆ. ಕೆಲವೇ ಕ್ಷಣಗಳಲ್ಲಿ ತೀರ್ಥಹಳ್ಳಿಗೆ ತಲುಪಲಿರುವ ಅವರು, ಸ್ಥಳೀಯ ರೈತರು ಹಾಗೂ ಸಾರ್ವಜನಿಕರೊಂದಿಗೆ ನೇರ ಸಂವಾದ ನಡೆಸಲಿದ್ದಾರೆ.

ತೀರ್ಥಹಳ್ಳಿ ಪಟ್ಟಣದ ಡಾ. ಯು.ಆರ್. ಅನಂತಮೂರ್ತಿ ಜ್ಯೂನಿಯರ್ ಕಾಲೇಜು ಆವರಣದಲ್ಲಿ ಈ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮಲೆನಾಡಿನಾದ್ಯಂತ ಸಾವಿರಾರು ಜನರು ಭಾಗವಹಿಸುತ್ತಿದ್ದಾರೆ.

ಕಸ್ತೂರಿರಂಗನ್ ವರದಿ ಜಾರಿಯಾದರೆ ಮಲೆನಾಡಿನ 484ಕ್ಕೂ ಹೆಚ್ಚು ಹಳ್ಳಿಗಳು ಕಂಟಕ ಎದುರಿಸಬೇಕಾಗುತ್ತದೆ. ಯಾವುದೇ ಅಭಿವೃದ್ಧಿ ಕೆಲಸಗಳು, ಮನೆ ನಿರ್ಮಾಣ ಹಾಗೂ ವಾಹನ ಸಂಚಾರಕ್ಕೂ ಕಠಿಣ ನಿರ್ಬಂಧಗಳು ಎದುರಾಗಲಿವೆ.

ವರದಿ ಜಾರಿಯಾದರೆ ‘ಬದುಕಿದ್ದೂ ಸತ್ತಂತೆ ಇರಬೇಕಾಗುತ್ತದೆ’ ಎಂಬ ಆಕ್ರೋಶ ಮಲೆನಾಡಿಗರಲ್ಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರಕ್ಕೆ ರಾಜ್ಯ ಸರ್ಕಾರ ತನ್ನ ಆಕ್ಷೇಪಣೆ ಸಲ್ಲಿಸಬೇಕಾದ ಅಗತ್ಯವಿದೆ. ಜನಪ್ರತಿನಿಧಿಗಳು ಮತ್ತು ಸ್ಥಳೀಯರ ಕುಂದು-ಕೊರತೆಗಳನ್ನು ಖುದ್ದು ಆಲಿಸಲು ಸಿಎಂ ಡಿಕೆಶಿ ಅವರು ಈ ವೇದಿಕೆಗೆ ಆಗಮಿಸುತ್ತಿದ್ದು, ರೈತರೊಂದಿಗೆ ನೇರ ಮುಖಾಮುಖಿ ಸಂವಾದ ನಡೆಸಲಿದ್ದಾರೆ.

ಡಿಕೆಶಿ ಅವರ ಭೇಟಿಯ ಹಿನ್ನೆಲೆಯಲ್ಲಿ ಶಿವಮೊಗ್ಗ ಹಾಗೂ ತೀರ್ಥಹಳ್ಳಿ ಪಟ್ಟಣದಾದ್ಯಂತ, ಮುಖ್ಯವಾಗಿ ಕಾರ್ಯಕ್ರಮದ ವೇದಿಕೆ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಕಸ್ತೂರಿರಂಗನ್ ವರದಿ ಕುರಿತು ರಾಜ್ಯ ಸರ್ಕಾರದ ಮುಂದಿನ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಲು ಮತ್ತು ಮಲೆನಾಡಿನ ಜನರ ಹಿತ ಕಾಯುವ ಭರವಸೆ ನೀಡಲು ಈ ಭೇಟಿ ಮಹತ್ವದ್ದಾಗಿದೆ.

Edited By :
PublicNext

PublicNext

19/09/2026 04:45 pm

Cinque Terre

2.94 K

Cinque Terre

0

ಸಂಬಂಧಿತ ಸುದ್ದಿ