ಸಾಗರ : ಶರಾವತಿ ಹಿನ್ನೀರಿನ ಮುಪ್ಪಾನೆ-ಹಲಿಗೆ ಮಾರ್ಗದಲ್ಲಿ ಕಳೆದ 22 ದಿನಗಳಿಂದ ಸ್ಥಗಿತಗೊಂಡಿದ್ದ ಲಾಂಚ್ ಸಂಚಾರವು ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ ಅವರ ಮುತುವರ್ಜಿಯಿಂದ ಪುನರಾರಂಭಗೊಂಡಿದೆ.
ಹಳೆಯ ಲಾಂಚ್ ತಾಂತ್ರಿಕ ದೋಷದಿಂದ ಕೆಟ್ಟು ನಿಂತಿದ್ದರಿಂದ ಈ ಭಾಗದ ಪ್ರಯಾಣಿಕರು, ಭಕ್ತಾದಿಗಳು ಹಾಗೂ ಸ್ಥಳೀಯರು ಸುಮಾರು 77 ಕಿ.ಮೀ. ಸುತ್ತುವರಿದು ಪ್ರಯಾಣಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಲಾಂಚ್ ಸೇವೆ ಇದ್ದಾಗ ಜೋಗ-ಸಿಗಂದೂರು ನಡುವಿನ ಸುಮಾರು 29 ಕಿ.ಮೀ. ಮಾರ್ಗದಲ್ಲಿ ಸಂಚರಿಸಲು ಸಾಧ್ಯವಾಗುತ್ತಿತ್ತು.
ಸಾರ್ವಜನಿಕರ ಸಮಸ್ಯೆಯನ್ನು ಗಮನಿಸಿದ ಹರತಾಳು ಹಾಲಪ್ಪ ಅವರು ಕಾರವಾರದ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಬದಲಿ ಲಾಂಚ್ ವ್ಯವಸ್ಥೆ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನೂತನ ಬದಲಿ ಲಾಂಚ್ ಸೇವೆ ಆರಂಭವಾದ ಸಂದರ್ಭದಲ್ಲಿ ಹರತಾಳು ಹಾಲಪ್ಪ ಅವರು ಪ್ರಮುಖ ಮುಖಂಡರು ಹಾಗೂ ಪ್ರಯಾಣಿಕರೊಂದಿಗೆ ಲಾಂಚ್‌ನಲ್ಲಿ ಪ್ರಯಾಣಿಸಿ ವ್ಯವಸ್ಥೆಯನ್ನು ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಅವರು, ತಮ್ಮ ಶಾಸಕತ್ವದ ಅವಧಿಯಲ್ಲಿ ಜೋಗ-ಸಿಗಂದೂರು ಸಂಪರ್ಕಕ್ಕಾಗಿ ನೂತನ ಮಾರ್ಗ ಹಾಗೂ ಲಾಂಚ್ ಸೌಲಭ್ಯ ಆರಂಭಿಸಲಾಗಿತ್ತು. ಆದರೆ ಕಳೆದ ಮೂರು ವಾರಗಳಿಂದ ಲಾಂಚ್ ಕೆಟ್ಟು ನಿಂತಿದ್ದರೂ ಪರ್ಯಾಯ ವ್ಯವಸ್ಥೆ ಕಲ್ಪಿಸದಿರುವುದು ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಾರ್ವಜನಿಕರ ಹಿತದೃಷ್ಟಿಯಿಂದ ನಿರಂತರ ಹಾಗೂ ಸುಗಮ ಲಾಂಚ್ ಸೇವೆ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು. ಜೋಗ-ಸಿಗಂದೂರು ಸಂಪರ್ಕಿಸುವ ಶರಾವತಿ ಹಿನ್ನೀರಿನ ಪ್ರಮುಖ ಮಾರ್ಗವಾಗಿರುವ ಈ ಸೇವೆಯನ್ನು ಭಕ್ತಾದಿಗಳು, ಪ್ರವಾಸಿಗರು ಹಾಗೂ ಸ್ಥಳೀಯರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಲಕ್ಷ್ಮೀನಾರಾಯಣ ಮಾತನಾಡಿ, ಮುಪ್ಪಾನೆ-ಹಲಿಗೆ ಲಾಂಚ್ ಸಂಚಾರ ಸ್ಥಗಿತಗೊಂಡಿದ್ದ ಸಂದರ್ಭದಲ್ಲಿ ಕಾರವಾರದ ಜಲಸಾರಿಗೆ ಇಲಾಖೆಯೊಂದಿಗೆ ಮಾತುಕತೆ ನಡೆಸಿ ಶೀಘ್ರ ದೊಡ್ಡ ಲಾಂಚ್ ಸೇವೆ ಆರಂಭವಾಗುವಂತೆ ಮಾಡುವಲ್ಲಿ ಹರತಾಳು ಹಾಲಪ್ಪ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.
ಕರೂರು ಹಾಗೂ ಬಾರಂಗಿ ಹೋಬಳಿಯ ಜನತೆಯ ಪರವಾಗಿ ಹಾಲಪ್ಪ ಅವರಿಗೆ ಕೃತಜ್ಞತೆ ಸಲ್ಲಿಸಿದರು.
PublicNext
19/09/2026 07:29 pm