ಶಿವಮೊಗ್ಗ : ಅನವೇರಿ ಕೈಮರ ರಸ್ತೆಯಲ್ಲಿ ಅತಿವೇಗ ಹಾಗೂ ಅಜಾಗರೂಕತೆಯಿಂದ ಬೈಕ್ ಚಲಾಯಿಸಿ ವ್ಯಕ್ತಿಯೊಬ್ಬರ ಸಾವಿಗೆ ಕಾರಣನಾದ ಆರೋಪಿಗೆ ಭದ್ರಾವತಿ ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ಅನವೇರಿ ಕೈಮರ ರಸ್ತೆಯಲ್ಲಿ ಭೋಜರಾಜ್ ಎಂಬುವರು ನಡೆದುಕೊಂಡು ಹೋಗುತ್ತಿದ್ದಾಗ, ಬಜಾಜ್ ಪಲ್ಸರ್ ಬೈಕ್ ಚಾಲಕ ನಿಖಿಲ್ ಎಂಬಾತ ಅನವೇರಿ ಕಡೆಯಿಂದ ಮಲ್ಲಾಪುರ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಬೈಕ್ ಚಲಾಯಿಸಿಕೊಂಡು ಬಂದು ಭೋಜರಾಜ್ ಅವರಿಗೆ ಡಿಕ್ಕಿ ಹೊಡೆಸಿದ್ದನು. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಭೋಜರಾಜ್ ಅವರು ಚಿಕಿತ್ಸೆ ಫಲಕಾರಿಯಾಗದೆ 27/12/2021ರಂದು ಮೃತಪಟ್ಟಿದ್ದರು.
ಈ ಕುರಿತು ಮೃತರ ತಾಯಿ ನೀಡಿದ ದೂರಿನನ್ವಯ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಆಗಿನ ತನಿಖಾಧಿಕಾರಿಯಾಗಿದ್ದ ಪಿಐ ಲಕ್ಷ್ಮೀಪತಿ ಅವರು ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಭದ್ರಾವತಿಯ 1ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ಸರ್ಕಾರದ ಪರವಾಗಿ ಅಪರ ಸರ್ಕಾರಿ ಅಭಿಯೋಜಕರಾದ ತಿಪ್ಪೇಶ್ ರಾವ್ ಅವರು ವಾದ ಮಂಡಿಸಿದ್ದರು.
ಆರೋಪಿಯ ಮೇಲಿನ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ, ಮಾನ್ಯ 1ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ನಾಸಿರ ಭಾನು ಅವರು ತೀರ್ಪು ನೀಡಿದ್ದು, ಆರೋಪಿ ಬೈಕ್ ಚಾಲಕ ನಿಖಿಲ್‌ಗೆ ಒಟ್ಟು 1 ವರ್ಷ 1 ತಿಂಗಳು 15 ದಿನಗಳ ಸಜಾ ಶಿಕ್ಷೆ ಹಾಗೂ ₹11,000 ದಂಡ ವಿಧಿಸಿ ಆದೇಶಿಸಿದ್ದಾರೆ.
PublicNext
18/09/2026 07:26 pm
LOADING...