ಶಿವಮೊಗ್ಗ : ಅಡಕೆ ಬೇಯಿಸುವ ಅಂಡೆಗೆ ಕಾಲು ಜಾರಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ದಾರುಣ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಒಡ್ಡಿನಕೊಪ್ಪ ನಿವಾಸಿ ಜೇನು ಕುಮಾರ್ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಸೆಪ್ಟೆಂಬರ್ 8ರಂದು ಅಡಕೆ ಶೆಡ್‌ನಲ್ಲಿ ಅಂಡೆಯ ಹಾಲು ತೆಗೆಯುವ ಸಮಯದಲ್ಲಿ ಜೇನು ಕುಮಾರ್ ಅವರ ಕಾಲು ಜಾರಿ, ಕುದಿಯುತ್ತಿದ್ದ ಅಡಕೆ ಅಂಡೆಗೆ ಬಿದ್ದಿದ್ದರು. ಈ ಭೀಕರ ದೃಶ್ಯ ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಅಂಡೆಗೆ ಬಿದ್ದ ಪರಿಣಾಮ ದೇಹದ ಬಹುತೇಕ ಭಾಗ ತೀವ್ರವಾಗಿ ಸುಟ್ಟು ಹೋಗಿತ್ತು. ತಕ್ಷಣವೇ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಈ ಕುರಿತು ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
PublicNext
17/09/2026 04:41 pm
LOADING...