ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಗರ : ಶ್ರೀ ಶಿವಪ್ಪ ನಾಯಕ ಯುವಜನ ಸಂಘದ 40ನೇ ವರ್ಷದ ಗಣೇಶೋತ್ಸವ ಸಂಭ್ರಮ

ಸಾಗರ : ನಗರದ ಶ್ರೀ ಶಿವಪ್ಪ ನಾಯಕ ಯುವಜನ ಸಂಘದ ವತಿಯಿಂದ ಆಯೋಜಿಸಲಾಗಿರುವ 40ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಅತ್ಯಂತ ಸಂಭ್ರಮ ಹಾಗೂ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ವಿಜೃಂಭಣೆಯಿಂದ ಜರುಗುತ್ತಿದೆ. ಸೆಪ್ಟೆಂಬರ್ 14ರಿಂದ ಆರಂಭವಾಗಿರುವ ಈ ಧಾರ್ಮಿಕ ಮಹೋತ್ಸವದಲ್ಲಿ ಈಗಾಗಲೇ ವೈವಿಧ್ಯಮಯ ಧಾರ್ಮಿಕ ವಿಧಿಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಿವೆ. ನಾಲ್ಕು ದಶಕಗಳ ಸುದೀರ್ಘ ಇತಿಹಾಸ ಹೊಂದಿರುವ ಈ ಸಂಘಟನೆಯು ಈ ಬಾರಿಯೂ ಶಿಸ್ತುಬದ್ಧವಾಗಿ ಉತ್ಸವವನ್ನು ಮುನ್ನಡೆಸುತ್ತಿದ್ದು, ನಗರದ ಸಾರ್ವಜನಿಕರಲ್ಲಿ ಹಬ್ಬದ ವಾತಾವರಣ ಮನೆಮಾಡಿದೆ ಎಂದು ಸಂಘದ ಪ್ರಮುಖರಾದ ಹರೀಶ್ ಮೊಗವೀರ ಹರ್ಷ ವ್ಯಕ್ತಪಡಿಸಿದ್ದಾರೆ.

ಉತ್ಸವದ ಅಂಗವಾಗಿ ಶ್ರದ್ಧಾ-ಭಕ್ತಿಯಿಂದ ಆಯೋಜಿಸಲಾಗಿದ್ದ ಮಹಾಗಣಪತಿ ಗಣಹೋಮ ಹಾಗೂ ಬೃಹತ್ ಸಾರ್ವಜನಿಕ ಅನ್ನಸಂತರ್ಪಣಾ ಕಾರ್ಯಕ್ರಮವು ಅದ್ಧೂರಿಯಾಗಿ ನೆರವೇರಿತು. ತೀವ್ರ ಬಿಸಿಲಿನ ವಾತಾವರಣದ ನಡುವೆಯೂ ಸಾವಿರಾರು ಭಕ್ತಾದಿಗಳು ಶಾಂತಿಯುತವಾಗಿ ಸರತಿ ಸಾಲಿನಲ್ಲಿ ನಿಂತು ಮಹಾಗಣಪತಿಯ ಪ್ರಸಾದ ಸ್ವೀಕರಿಸಿದರು. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬಫೆ ವ್ಯವಸ್ಥೆಯ ಜೊತೆಗೆ ಕುಳಿತು ಊಟ ಮಾಡುವಂತಹ ಅಚ್ಚುಕಟ್ಟಾದ ಸೌಲಭ್ಯ ಕಲ್ಪಿಸಲಾಗಿತ್ತು. ಸುಮಾರು 5,000ರಿಂದ 6,000ಕ್ಕೂ ಹೆಚ್ಚು ಭಕ್ತಾದಿಗಳು ಸಂಜೆ 4 ಗಂಟೆಯವರೆಗೂ ಸತತವಾಗಿ ಅನ್ನಪ್ರಸಾದ ಸ್ವೀಕರಿಸಿದ್ದು, ರುಚಿಕರವಾದ ಹಾಗೂ ಶುಚಿತ್ವದ ಊಟೋಪಚಾರ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಮುಂಬರುವ ದಿನಗಳಲ್ಲಿ ಗಣೇಶೋತ್ಸವದ ವೇದಿಕೆಯಲ್ಲಿ ಕಲಾ ರಸಿಕರಿಗಾಗಿ ವರ್ಣರಂಜಿತ ಸಾಂಸ್ಕೃತಿಕ ರಸದೌತಣ ಏರ್ಪಡಿಸಲಾಗಿದೆ. ಖ್ಯಾತ ಗಾಯಕ ಜಗದೀಶ್ ಪುತ್ತೂರು ಅವರ ಭಕ್ತಿ ಸಂಗೀತ, ಉಡುಪಿಯ ಪ್ರಸಿದ್ಧ ‘ಕಲಾಮಯಂ’ ತಂಡದ ವಿಶೇಷ ಕಾರ್ಯಕ್ರಮಗಳು, ಆರ್ಕೆಸ್ಟ್ರಾ ಹಾಗೂ ಬುಧವಾರದಂದು ನಡೆಯಲಿರುವ ‘ಮೂರುಮುತ್ತು’ ಹಾಸ್ಯ ನಾಟಕ ಪ್ರಮುಖ ಆಕರ್ಷಣೆಯಾಗಲಿವೆ. ನಂತರ ಗುರುವಾರದಂದು ವಿವಿಧ ಜಾನಪದ ಹಾಗೂ ಭವ್ಯ ಕಲಾತಂಡಗಳ ವಾದ್ಯ-ಮೇಳಗಳೊಂದಿಗೆ ಗಣೇಶನ ಭವ್ಯ ವಿಸರ್ಜನಾ ಶೋಭಾಯಾತ್ರೆ ಅದ್ಧೂರಿಯಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಾಗಲಿದೆ ಎಂದು ಸಂಘದ ಕಾರ್ಯದರ್ಶಿ ರಾಘವೇಂದ್ರ ಕಾಮತ್ ಮಾಹಿತಿ ನೀಡಿದರು.

ಕಳೆದ 40 ವರ್ಷಗಳಿಂದ ನಿರಂತರವಾಗಿ ಈ ಉತ್ಸವವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿರುವ ಸಂಘದ ಅಧ್ಯಕ್ಷ ದಿನಕರ್, ಕಾರ್ಯದರ್ಶಿ ರಾಘವೇಂದ್ರ ಕಾಮತ್, ಖಜಾಂಚಿ ಕಿರಣ್ ಸಾಲ್ಯಾನ್ ಹಾಗೂ ಸಮಸ್ತ ಪದಾಧಿಕಾರಿಗಳ ಕಾರ್ಯವೈಖರಿಯನ್ನು ಸಂಘಟಕರು ಶ್ಲಾಘಿಸಿದರು. ಉತ್ಸವದ ಯಶಸ್ಸಿಗೆ ಉದಾರವಾಗಿ ದೇಣಿಗೆ ಮತ್ತು ಸಹಕಾರ ನೀಡಿದ ಎಲ್ಲಾ ದಾನಿಗಳಿಗೆ ಹಾಗೂ ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸಿದ ಮುಖಂಡರು, ಮುಂಬರುವ ಎಲ್ಲಾ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿಸರ್ಜನಾ ಮಹೋತ್ಸವದಲ್ಲಿ ಸಮಸ್ತ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉತ್ಸವವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

20/09/2026 04:01 pm

Cinque Terre

200

Cinque Terre

0

ಸಂಬಂಧಿತ ಸುದ್ದಿ