ಬೆಳಗಾವಿ: ಜಮೀನುಗಳಿಗೆ ಆನೆಗಳ ದಂಡು ಲಗ್ಗೆ ಇಡುತ್ತಿದ್ದು, ಕಾಡಿಗೆ ಓಡಿಸಲು ಅರಣ್ಯಾಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.
ಖಾನಾಪುರ ಅರಣ್ಯ ಪ್ರದೇಶದಲ್ಲಿ ಒಂದು ವಾರದಿಂದ ಆನೆಗಳ ಹಿಂಡು ಪಾಲಿ, ಹೆಮ್ಮಡಗಾ, ಅಬನಾಳಿ, ಡೊಂಗರಗಾವ, ಶಿರೋಳಿವಾಡಾ ಭಾಗದಲ್ಲಿ ಆನೆಗಳ ಓಡಾಟ ಮುದುವರೆದಿದೆ. ಪಾಲಿ ಗ್ರಾಮದ ಭತ್ತದ ಗದ್ದೆಗಳಲ್ಲಿ ಬುಧವಾರ ರಾತ್ರಿ 7 ಆನೆಗಳು ಪ್ರತ್ಯಕ್ಷವಾಗಿವೆ. ಆನೆಗಳನ್ನು ಕಾಡಿಗೆ ಓಡಿಸಲು ಇಡೀ ರಾತ್ರಿ ಅರಣ್ಯಾಧಿಕಾರಿಗಳಿಂದ ಕೂಬಿಂಗ್ ಮಾಡಿದ್ದಾರೆ. ಹಿಂಡಿನಲ್ಲಿ ಒಂಟಿಸಲಗ ಸೇರಿ ಎರಡು ಮರಿ ಆನೆಗಳು ಇರುವ ಮಾಹಿತಿ ಲಭ್ಯವಾಗಿದೆ.
ಎಸಿಎಫ್ ಬಸವರಾಜ ವಾಳದ, ಆರ್‌ಎಫ್‌ಒ ಸಯ್ಯದಸಾಬ್ ನದಾಫ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಪಟಾಕಿ ಹಾಗೂ ಮದ್ದು ಸಿಡಿಸಿ ಆನೆಗಳನ್ನು ಬೆನ್ನಟ್ಟಿದರೂ ಗಜಪಡೆ ಕಾಡಿಗೆ ಮರಳುತ್ತಿಲ್ಲ. ಆನೆಗಳ ಚಲನವಲನ ಪತ್ತೆಗೆ ಡ್ರೋನ್ ಮೂಲಕ ಹಾಗೂ ಅರಣ್ಯ ಸಿಬ್ಬಂದಿಯಿಂದ ನಿರಂತರ ಕಣ್ಗಾವಲು ಇಡಲಾಗಿದೆ.
ಪಾಲಿ ಬಳಿ ರಸ್ತೆ ಬದಿಯಲ್ಲಿ ಆನೆಗಳನ್ನು ಕಂಡು ಬೈಕ್ ಸವಾರರು ಆತಂಕಗೊಂಡ ಘಟನೆಯೂ ನಡೆದಿದೆ. ಆಹಾರ ಅರಸಿ ಹಳಿಯಾಳ, ಕ್ಯಾಸಲರಾಕ್, ಜಗಳಪೇಟೆ, ತಿನೈಘಾಟ್, ಗಣೇಶಗುಡಿ ಭಾಗದಿಂದ ಅನೆಗಳು ಬಂದಿರುವ ಶಂಕೆ ವ್ಯಕ್ತವಾಗಿದೆ.
ಆನೆಗಳ ಹಿಂಡಿನಿಂದ ಸಾರ್ವಜನಿಕರಿಗೆ ಅರಣ್ಯ ಇಲಾಖೆ ಎಚ್ಚರಿಕೆ ವಹಿಸಲು ಮನವಿ ಮಾಡಿದ್ದಾರೆ. ಅರಣ್ಯಾಧಿಕಾರಿಗಳ ಗಮನಕ್ಕೆ ಬಾರದೇ ಆನೆಗಳ ಬಳಿ ಹೋಗುವುದು, ಕೂಗಾಟ ಅಥವಾ ಪಟಾಕಿ ಸಿಡಿಸುವ ಸಾಹಸ ಮಾಡದಂತೆ ಡಿಸಿಎಫ್ ಎನ್. ಇ. ಕ್ರಾಂತಿ ಮನವಿ ಮಾಡಿದ್ದಾರೆ.
PublicNext
17/09/2026 04:58 pm
LOADING...