ಬೆಂಗಳೂರು: ಆತ ಪತ್ನಿಯಿಂದ ಒಂದು ವರ್ಷ ದೂರ ಇದ್ದ. ದಿನ ದಿನಕ್ಕೂ ಆಕೆ ಮೇಲೆ ದ್ವೇಷ ಹೆಚ್ಚಿಸಿಕೊಂಡಿದ್ದ. ಪತ್ನಿಯ ಕೊಲೆ ಮಾಡಲೇ ಬೇಕು ಅನ್ನೋ ಹುಚ್ಚಿಗೆ ಬಿದ್ದಿದ್ದ ಅನ್ಸುತ್ತೆ. ಏಕಾ ಏಕಿ ಪತ್ನಿ ಕೆಲಸ ಮಾಡೋ ಜಾಗಕ್ಕೆ ನುಗ್ಗಿ ಆ್ಯಸಿಡ್ ದಾಳಿ ಮಾಡಿದ್ದಲ್ಲದೇ ಮಚ್ಚಿನಿಂದ ಕೊಚ್ಚಿ ಹಾಕಿದ್ದಾನೆ.
ಇವತ್ತು ಬೆಳಗ್ಗೆ ಸರಿಯಾಗಿ 9.30ರ ಟೈಮು ಅನ್ಸುತ್ತೆ. ನರ್ಸ್ ಒಬ್ಬಳು ಖಾಸಗಿ ಆಸ್ಪತ್ರೆಯಿಂದ ತಿಂಡಿ ತಿನ್ನೋಕೆ ಅಂತಾ ಹೊರಗಡೆ ಬಂದಿದ್ಲು. ಹೀಗಿರೋವಾಗ ಏಕಾಏಕಿ ಮಚ್ಚು, ಚಾಕು, ಆ್ಯಸಿಡ್ ಸಮೇತ ಬೈಕ್ ನಲ್ಲಿ ಬಂದಿಳಿದಿದ್ದ ಆಸಾಮಿಯೊಬ್ಬ ಏಕಾಏಕಿ ನರ್ಸ್ ಮೇಲೆ ದಾಳಿ ಮಾಡಿದ್ದ. ಆ್ಯಸಿಡ್ ಎರಚುತ್ತಿದ್ದಂತೆಯೇ ಮಚ್ಚಿನಿಂದ ಕಚಕ್ ಕಚಕ್ ಅಂತಾ ಕೊಚ್ಚಲು ಶುರು ಮಾಡಿದ್ದ. ಆತನ ಕ್ರೌರ್ಯ ಕಂಡು ಕಂಗಾಲಾಗಿದ್ದ ಜನ ಕೈನಲ್ಲಿದ್ದ ಮೊಬೈಲ್ ಕ್ಯಾಮೆರಾ ಆನ್ ಮಾಡಿ ವಿಡಿಯೋ ಮಾಡ್ತಿದ್ರು. ಒಂದಷ್ಟು ಜನ ಆತನನ್ನು ತಡೆಯೋಕೆ ಟ್ರೈ ಮಾಡಿದ್ರು. ಅಷ್ಟರಲ್ಲಾಗಲೇ ನರ್ಸ್ ಮೇಲೆ ಅಟ್ಯಾಕ್ ಮಾಡಿದ್ದವ ನಾಲ್ಕೈದು ಏಟು ಬೀಸಿದ್ದ. ರಕ್ತದ ಮಡುವಲ್ಲಿ ಕೆಳಗೆ ಬಿದ್ದು ನರ್ಸ್ ನರಳಾಡುವಂತಾಗಿತ್ತು. ಹೀಗೆ ಮಾಡಿದ್ದವ ಯಾರು ಅಂತಾ ನೋಡಿದಾಗ ಆಕೆಯ ಪತಿಯೇ ಅನ್ನೋದು ಗೊತ್ತಾಗಿತ್ತು.
ಹೌದು.. ಇಂತಹದ್ದೊಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು ಬೆಂಗಳೂರಿನ ಜೆಪಿ ನಗರದ 3ನೇ ಫೇಸ್‌ನಲ್ಲಿ ಪತಿಯೊಬ್ಬ ತನ್ನ ಪತ್ನಿಯ ಮೇಲೆ ಮಚ್ಚಿನಿಂದ ದಾಳಿ ನಡೆಸಿ, ಆಸಿಡ್ ಎರಚಿದ್ದಾನೆ. ದಾಳಿಗೊಳಗಾದ ಮಹಿಳೆಯನ್ನು ನಾರಾಯಣ ಕ್ಲಿನಿಕ್‌ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಕೋಲ್ಕತ್ತಾ ಮೂಲದ ಇಪ್ಪತ್ತಾರು ವರ್ಷದ ಮಧುಮಿತ.
ಇಂದು ಬೆಳಿಗ್ಗೆ 9:15 ರ ಸುಮಾರಿಗೆ ಮಧುಮಿತ ತಿಂಡಿ ತಿನ್ನಲು ಹೊರಗೆ ಬಂದಾಗ, ಬೈಕ್‌ನಲ್ಲಿ ಬಂದ ಪತಿ ವೆಂಕಟೇಶ್ ಚಾಕು, ಮಚ್ಚು ಮತ್ತು ಆಸಿಡ್‌ನೊಂದಿಗೆ ಆಕೆಯನ್ನು ಅಟ್ಟಾಡಿಸಿಕೊಂಡು ಬಂದಿದ್ದಾನೆ. ಆಸ್ಪತ್ರೆಯ ಪಾರ್ಕಿಂಗ್ ಜಾಗದಲ್ಲಿ ಆಕೆಯ ಮೇಲೆ ಹಲ್ಲೆ ನಡೆಸಿ, ಮಚ್ಚಿನಿಂದ ಕೊಚ್ಚಿ ಆಸಿಡ್ ಎರಚಿದ್ದಾನೆ. ಈ ಮಹಿಳೆಯ ರಕ್ಷಣೆಗೆ ಧಾವಿಸಿದ ಸ್ಥಳೀಯರ ಮೇಲೆಯೂ ಆರೋಪಿ ಹಲ್ಲೆಗೆ ಯತ್ನಿಸಿದ್ದಾನೆ.
ಈ ವೇಳೆ ಸ್ಥಳೀಯರು ಕಲ್ಲಿನಿಂದ ಹೊಡೆದು ಆರೋಪಿಯನ್ನು ತಡೆಯಲು ಯತ್ನಿಸುತ್ತಿದ್ರು. ಇದೇ ಟೈಮಲ್ಲಿ ಪಕ್ಕದ ಸಿಗ್ನಲ್‌ನಲ್ಲಿಯೇ ಕರ್ತವ್ಯದಲ್ಲಿದ್ದ ಸಂಚಾರ ಪೊಲೀಸರು ತಕ್ಷಣ ಬಂದು ಆರೋಪಿ ವೆಂಕಟೇಶ್‌ನನ್ನು ವಶಕ್ಕೆ ಪಡೆದಿದ್ದಾರೆ. ನಂತರ ಆರೋಪಿಯನ್ನು ಜೆಪಿ ನಗರ ಪೊಲೀಸ್ರು ಅರೆಸ್ಟ್ ಮಾಡಿದ್ದಾರೆ.
ತನಿಖೆ ವೇಳೆ ಆರೋಪಿ ವೆಂಕಟೇಶ್ ಹಾಗೂ ಮಧುಮಿತ 2024ರಲ್ಲಿ ಮಧುರೈನಲ್ಲಿ ಮದುವೆ ಆಗಿದ್ರು ಅಂತಾ ಗೊತ್ತಾಗಿದೆ. ಅದಕ್ಕೂ ಮುನ್ನ ಟಿಂಡರ್ ಆ್ಯಪ್ ನಲ್ಲಿ ಇಬ್ಬರಿಗೂ ಪರಿಚಯ ಆಗಿತ್ತು. ಪರಿಚಯ ಪ್ರೀತಿಗೆ ತಿರುಗಿ ಮನಸಾರೆ ಒಪ್ಪಿ ಮದುವೆ ಕೂಡ ಆಗಿದ್ರು. ಬೆಂಗಳೂರಿನಲ್ಲೇ ಇಬ್ಬರು ಕೆಲಸ ಮಾಡ್ತಿದ್ರು. ಆದ್ರೆ ಮದುವೆಯಾದ ಒಂದು ವರ್ಷದಲ್ಲಿಯೇ ಇಬ್ಬರ ಮಧ್ಯೆ ಜಗಳ ಶುರು ಆಗಿತ್ತು. ಮಧುಮಿತ ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಫೋಟೋ ಅಂತಾ ಶೇರ್ ಮಾಡ್ತಿದ್ಲಂತೆ. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳ ಆಗಿದೆ.
ಪತಿ ವೆಂಕಟೇಶ್ ಅನುಮಾನ ಪಡೋದಲ್ದೆ ಪದೇ ಪದೇ ಜಗಳ ತೆಗೀತ್ತಿದ್ದ. ಆ ಜಗಳ ಇಬ್ಬರೂ ಪ್ರತ್ಯೇಕ ವಾಸ ಮಾಡುವಂತೆ ಮಾಡಿತ್ತು. ಒಂದು ವರ್ಷದ ಹಿಂದೆ ವೆಂಕಟೇಶ ಚೆನ್ನೈಗೆ ಶಿಫ್ಟ್ ಆಗಿದ್ರೆ, ಜೆಪಿ ನಗರ ಲಿಮಿಟ್ಸ್ ನ ಪಿಜಿ ರೂಂ ಮಾಡಿದ್ದ ಮಧುಮಿತ ಇದೇ ಆಸ್ಪತ್ರೆಲಿ ನರ್ಸ್ ಆಗಿ ಕೆಲಸ ಮಾಡ್ತಿದ್ಲು. ಆದ್ರೆ ಇಬ್ಬರ ಮಧ್ಯೆ ಜಗಳ ಮಾತ್ರ ನಿಂತಿರಲಿಲ್ಲ. ಅದೇ ಜಗಳ ಜೋರಾಗಿ ನಿನ್ನೆ ಚೆನ್ನೈನಿಂದ ಬೆಂಗಳೂರಿಗೆ ಬೈಕ್ ನಲ್ಲೇ ಬಂದಿದ್ದವ ದಾರಿಯಲ್ಲಿ ಮಚ್ಚು, ಚಾಕು, ಆ್ಯಸಿಡ್ ತಂದಿದ್ದಾನೆ. ಬೆಳಗ್ಗೆ ಪತ್ನಿ ಹೊರ ಬರೋವರೆಗೂ ಕಾದು ಕೂತಿದ್ದ.
ಆಕೆ ಹೊರ ಬರ್ತಿದ್ದಂತೆಯೇ ಕ್ರೌರ್ಯ ಮೆರೆದಿದ್ದಾನೆ ಅನ್ನೋದು ತನಿಖೆ ವೇಳೆ ಗೊತ್ತಾಗಿದೆ. ಸದ್ಯ ಗಾಯಾಳು ಮಧುಮಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜೆಪಿ ನಗರ ಪೊಲೀಸ್ರು ತನಿಖೆ ಮುಂದುವರಿಸಿದ್ದಾರೆ.
PublicNext
18/09/2026 05:08 pm