ಧಾರವಾಡ : ಮೊನ್ನೆಯಷ್ಟೇ ಜಮೀನಿನ ಬಿ ಖರಾಬ್ ದಾಖಲೆ ತೆಗೆದುಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ₹50 ಲಕ್ಷ ಲಂಚ ಪಡೆಯುತ್ತಿದ್ದ ಧಾರವಾಡ ತಹಶೀಲ್ದಾರ್ ಸಚ್ಚಿದಾನಂದ ಕುಚನೂರ ಅವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದು ಜಗಜ್ಜಾಹಿರವಾಗಿದೆ. ಆದರೆ, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದ್ದು, ಯರಿಕೊಪ್ಪ ಬಳಿ ಇರುವ ಆ ಜಮೀನಿನ ಮಾಲೀಕರು ಮಹತ್ವದ ಅಂಶಗಳನ್ನು ಇದೀಗ ಬಿಚ್ಚಿಟ್ಟಿದ್ದಾರೆ.
ಹೌದು! ಈ ದೃಶ್ಯಗಳಲ್ಲಿ ಕಾಣುತ್ತಿರುವ ಈ ರೈತರು ಯರಿಕೊಪ್ಪ ಗ್ರಾಮದವರು. ಗ್ರಾಮದ ಸರ್ವೆ ನಂಬರ್ 12ರಲ್ಲಿ ಒಟ್ಟು 33 ಎಕರೆ 15 ಗುಂಟೆ ಜಮೀನು ಇತ್ತು. ಇದರಲ್ಲಿ 20 ಎಕರೆ 15 ಗುಂಟೆ ಶಿವಪುತ್ರಪ್ಪ ಅಂಗಡಿ ಅವರಿಗೆ ಟೆನೆನ್ಸಿ ಕಾಯ್ದೆಯಡಿ ಬಂದಿತ್ತು. ಬಾಕಿ 13 ಎಕರೆ ಜಮೀನು ಸಹ ಟೆನೆನ್ಸಿ ಕಾಯ್ದೆಯಡಿ ಇದೇ ಶಿವಪುತ್ರಪ್ಪ ಅಂಗಡಿ ಕುಟುಂಬಕ್ಕೇ ಸೇರಬೇಕಿತ್ತು. ಆದರೆ, ಆ ಜಮೀನನ್ನು ಬಿ ಖರಾಬ್ ಎಂದು ಮಾಡಿದ್ದರಿಂದ ಈ ಸಂಬಂಧ ಅಂಗಡಿ ಕುಟುಂಬದವರು ಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಹಾಗೂ ಸಿವಿಲ್ ಕೋರ್ಟ್‌ನಲ್ಲಿ ಈ ವ್ಯಾಜ್ಯ ಇರುವಾಗಲೇ ಕೆಲವರು ಈ 13 ಎಕರೆ ಪಹಣಿಯಲ್ಲಿ ತಮ್ಮ ಹೆಸರು ನಮೂದಿಸಿಕೊಂಡಿದ್ದರು. ಕಂದಾಯ ಇಲಾಖೆ ಅಧಿಕಾರಿಗಳು ಶಾಮೀಲಾಗಿ ಈ ಅಕ್ರಮ ಎಸಗಿ 13 ಎಕರೆಯಲ್ಲಿ ಬೇರೆಯವರ ಹೆಸರು ನಮೂದು ಮಾಡಿದ್ದಾರೆ. ಈ 13 ಎಕರೆ ಪೈಕಿ 6 ಎಕರೆ 32 ಗುಂಟೆ ಜಮೀನನ್ನು ಮಂಜುನಾಥ ಎನ್ನುವವರು ಖರೀದಿಸಿದ್ದರು. ಆದರೆ, ಮಂಜುನಾಥ ಎನ್ನುವವರು ಪೂರ್ತಿ 33 ಎಕರೆ 15 ಗುಂಟೆ ಜಮೀನು ಖರೀದಿಸಿರುವುದಾಗಿ ಸುಳ್ಳು ಹೇಳಿ ಬಿ ಖರಾಬ್ ತೆಗೆದುಹಾಕಲು ತಹಶೀಲ್ದಾರರಿಗೆ ಹೇಳಿದ್ದರು ಎಂಬ ಅಂಶ ಗೊತ್ತಾಗಿದೆ ಎಂದು ಜಮೀನು ಮಾಲೀಕ ಶಿವಪುತ್ರ ಅವರ ಪುತ್ರ ಬಸವರಾಜ ತಿಳಿಸಿದ್ದಾರೆ.
ಕೇವಲ 6 ಎಕರೆ 32 ಗುಂಟೆ ಖರೀದಿಸಿದ್ದ ಮಂಜುನಾಥ ಪೂರ್ತಿ 33 ಎಕರೆ 15 ಗುಂಟೆ ಖರೀದಿಸಿದ್ದಾಗಿ ಹೇಳಿದ್ದು ಏಕೆ? ಅದರಲ್ಲೂ ಕೋರ್ಟ್‌ನಲ್ಲಿ ವ್ಯಾಜ್ಯ ಇರುವಾಗಲೇ ಬಿ ಖರಾಬ್ ತೆಗೆದು ಶೇತ್ಕಿ ಎಂದು ನಮೂದಿಸಲು ತಹಶೀಲ್ದಾರ್ ಸಚ್ಚಿದಾನಂದ ಕೂಡ ₹1 ಕೋಟಿ ರೂಪಾಯಿಗೆ ಬೇಡಿಕೆ ಇಡುವುದರ ಜೊತೆಗೆ 1 ಎಕರೆ ಹೊಲವನ್ನೂ ಕೊಡಲು ಬೇಡಿಕೆ ಇಟ್ಟಿದ್ದರು. ಆದರೆ, ಜಮೀನಿನ ಮಾಲೀಕರು ಕೂಡ ಇದೀಗ ಮುಖ್ಯವಾಹಿನಿಗೆ ಬಂದಿದ್ದು, ಆ ಜಮೀನು ಖರೀದಿಯೇ ಆಗಿಲ್ಲ. ಖೊಟ್ಟಿ ದಾಖಲೆ ಕೊಟ್ಟು ಪಹಣಿಯಲ್ಲಿ ಹೆಸರು ನಮೂದಿಸಿರುವುದಾಗಿ ಇದೀಗ ಹಲವರು ಆರೋಪಿಸುತ್ತಿದ್ದಾರೆ.
ಒಟ್ಟಾರೆ ₹50 ಲಕ್ಷ ರೂಪಾಯಿ ಲಂಚ ಪಡೆಯಲು ಹೋಗಿ ಇದೀಗ ತಹಶೀಲ್ದಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಆದರೆ, 13 ಎಕರೆಯ ಪಹಣಿಯಲ್ಲಿ ಮತ್ತೊಬ್ಬರ ಹೆಸರು ಸೇರ್ಪಡೆ ಮಾಡುವಲ್ಲಿಯೂ ಅಕ್ರಮ ನಡೆದಿದ್ದು, ನ್ಯಾಯಾಲಯದಲ್ಲಿ ಪ್ರಕರಣ ಇರುವಾಗಲೇ ಈ ಲೋಪ ಎಸಗಿದ ಇನ್ನುಳಿದ ಕಂದಾಯ ಇಲಾಖೆ ಅಧಿಕಾರಿಗಳ ಮೇಲೂ ಕ್ರಮ ಆಗಬೇಕು ಎಂಬ ಒತ್ತಾಯ ಕೇಳಿಬಂದಿದ್ದು, ಉನ್ನತ ಮಟ್ಟದ ಅಧಿಕಾರಿಗಳು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೋ ಕಾದು ನೋಡಬೇಕಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
18/09/2026 07:39 pm