ಮೂಲ್ಕಿ : ಕಾರ್ನಾಡಿನಿಂದ ಮೂಲ್ಕಿ ನಗರಕ್ಕೆ ತೆರಳುವ ಮುಖ್ಯ ರಸ್ತೆಯಲ್ಲಿ ಸುಮಾರು 100 ವರ್ಷ ಹಳೆಯ ಬೃಹತ್ ಅಲದ ಮರವೊಂದು ರಸ್ತೆ ಸಂಚಾರಕ್ಕೆ ಮತ್ತು ಪಕ್ಕದ ಮನೆಯವರಿಗೆ ತೀವ್ರ ಸಮಸ್ಯೆಯಾಗುತ್ತಿದ್ದು, ಕಳೆದ ಹತ್ತು ವರ್ಷಗಳಿಂದ ತೆರವಿಗೆ ಬೇಡಿಕೆ ಮಂಡಿಸಿದ್ದರೂ ಸಮಸ್ಯೆ ಪರಿಹರಿಸಿಲ್ಲ ಎಂದು ಅಲ್ಲಿನ ನಿವಾಸಿ ಹೈಜೀನಿಯಸ್ ಅರಾಹ್ನ ಅವರು ಶನಿವಾರ ಮೂಲ್ಕಿ ತಾಲೂಕು ಪ್ರಜಾ ಸೇವಾ ಆಂದೋಲನ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಮೂಲ್ಕಿ ತಾಲೂಕು ತಹಶೀಲ್ದಾರ್ ಪೃಥ್ವಿ ಸ್ಥಾನಿಕಂ ಮಾತನಾಡಿ, ಸಭೆಯಲ್ಲಿ ಉಪಸ್ಥಿತರಿದ್ದ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚಿಸಿ, ಮರ ತೆರವು ಕಷ್ಟಸಾಧ್ಯವಾದ್ದರಿಂದ ಸಮಸ್ಯೆ ಉಂಟುಮಾಡುತ್ತಿರುವ ಗೆಲ್ಲುಗಳನ್ನು ತಕ್ಷಣ ತೆರವುಗೊಳಿಸುವಂತೆ ತಿಳಿಸಿದರು.
ಇದೇ ಪರಿಸರದಲ್ಲಿ ರಸ್ತೆ ಚರಂಡಿಯಲ್ಲಿ ದುರ್ವಾಸನೆಯುಕ್ತ ತ್ಯಾಜ್ಯ ನೀರು ಹರಿಯುತ್ತಿದ್ದು, ಹಲವು ಬಾರಿ ದೂರು ನೀಡಿದರೂ ಸಮಸ್ಯೆ ಬಗೆಹರಿದಿಲ್ಲ. ನಗರಾಡಳಿತ ಈ ಬಗ್ಗೆ ಕ್ರಮ ಕೈಗೊಂಡರೂ ಸಮಸ್ಯೆ ಪುನರಾವರ್ತನೆಯಾಗುತ್ತಿದೆ ಎಂದು ಅರಾಹ್ನ ದೂರಿದರು. ಮೂಲ್ಕಿ ನಪಂ ಮುಖ್ಯಾಧಿಕಾರಿ ಮಧುಕರ್ ಕೆ. ಪ್ರತಿಕ್ರಿಯಿಸಿ, ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡು ಸಮಸ್ಯೆ ಸರಿಪಡಿಸುವ ಭರವಸೆ ನೀಡಿದರು.
ಪಡುಪಣಂಬೂರು ಗ್ರಾಪಂ ವ್ಯಾಪ್ತಿಯ ಬೆಳ್ಳಾಯರು ನಿವಾಸಿ ಪದ್ಮನಾಭ ಅವರು ಎರಡು ವರ್ಷಗಳಿಂದ ಹೊಸ ರೇಷನ್ ಕಾರ್ಡ್‌ಗಾಗಿ ಮನವಿ ಸಲ್ಲಿಸುತ್ತಿದ್ದರೂ ಕಾರ್ಡ್ ನೀಡಿಲ್ಲ. ರೇಷನ್ ಕಾರ್ಡ್ ಯಾವಾಗ ನೀಡುತ್ತೀರಿ ಎಂದು ಅವರು ಪ್ರಶ್ನಿಸಿದರು. ತಹಶೀಲ್ದಾರ್ ಪೃಥ್ವಿ ಸ್ಥಾನಿಕಂ ಪ್ರತಿಕ್ರಿಯಿಸಿ, ಸರ್ಕಾರದ ನಿರ್ದೇಶನ ಬಂದ ತಕ್ಷಣ ರೇಷನ್ ಕಾರ್ಡ್ ನೀಡಲಾಗುವುದು ಎಂದರು.
ಅತಿಕಾರಿಬೆಟ್ಟು ಗ್ರಾಮದ ದಿನೇಶ್ಚಂದ್ರ ಅಜಿಲ ಅವರು ತಾವು ಈ ಹಿಂದೆ ಮೆಸ್ಕಾಂ ವಿದ್ಯುತ್ ತಂತಿ ಮತ್ತು ಆರ್‌ಟಿಸಿ ಗೊಂದಲಗಳಿಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ಅರ್ಜಿಗಳ ಬಗ್ಗೆ ಪ್ರಶ್ನಿಸಿದರು. ಈ ಬಗ್ಗೆ ಮೂರು ದಿನದೊಳಗೆ ಉತ್ತರಿಸುವುದಾಗಿ ತಿಳಿಸಲಾಯಿತು.
ಮೂಲ್ಕಿ ತಾಲೂಕು ತಹಶೀಲ್ದಾರ್ ಪೃಥ್ವಿ ಸ್ಥಾನಿಕಂ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಮೂಲ್ಕಿ ತಾಲೂಕು ಇಒ ಅರ್ಚಿತ್ ಪರಾಗ್ ಡೋಂಗ್ರೆ, ಮೂಲ್ಕಿ ನಪಂ ಮುಖ್ಯಾಧಿಕಾರಿ ಮಧುಕರ್ ಕೆ., ಮೂಲ್ಕಿ ಉಪತಹಶೀಲ್ದಾರ್ ದಿಲೀಪ್ ರೋಡ್ಕರ್, ಆರ್‌ಐ ಮೋಹನ್ ಹಾಗೂ ನಾನಾ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಎ ಆಶಾ ಮೆಹಂದಳೆ ಕಾರ್ಯಕ್ರಮ ನಿರ್ವಹಿಸಿದರು.
ಚಿತ್ರ : ಮೂಲ್ಕಿ ತಾಲೂಕು ಪ್ರಜಾ ಸೇವಾ ಆಂದೋಲನ ಸಭೆಯಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಉತ್ತರಿಸಲಾಯಿತು.
Kshetra Samachara
19/09/2026 05:54 pm