ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು : ಸುಳ್ಯ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ಗೆ ಆಗ್ರಹ: ಕೀರ್ತನ್ ಗೌಡರಿಂದ ಸಿಎಂಗೆ ಮನವಿ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಅಭಿವೃದ್ಧಿ ಪ್ಯಾಕೇಜ್ ಘೋಷಿಸಿ, ಹಂತ ಹಂತವಾಗಿ ಅನುಷ್ಠಾನಗೊಳಿಸುವಂತೆ ಎನ್‌ಎಸ್‌ಯುಐ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷ ಕೀರ್ತನ್ ಗೌಡ ಕೊಡಪಾಲ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಸುಳ್ಯ ಕ್ಷೇತ್ರದ ಅಭಿವೃದ್ಧಿಗೆ ರಸ್ತೆ-ಮೂಲಸೌಕರ್ಯ, ಕೃಷಿ, ಯುವಜನತೆ, ಶಿಕ್ಷಣ, ಉದ್ಯೋಗ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ಆದ್ಯತೆ ನೀಡಬೇಕು ಎಂದು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಮಳೆಗಾಲದಲ್ಲಿ ಹಾನಿಗೊಳಗಾಗುವ ರಸ್ತೆ, ಸೇತುವೆ ಹಾಗೂ ಚರಂಡಿಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವುದು, ಭೂಕುಸಿತ ತಡೆ ಕ್ರಮ ಕೈಗೊಳ್ಳುವುದು ಹಾಗೂ ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ, ಶೀತಗೃಹ ಮತ್ತು ಸಂಸ್ಕರಣಾ ಘಟಕಗಳನ್ನು ಒದಗಿಸುವಂತೆ ಕೋರಿದ್ದಾರೆ.

ಆನೆ ಸೇರಿದಂತೆ ವನ್ಯಜೀವಿಗಳಿಂದಾಗುವ ಬೆಳೆ ಹಾನಿ ತಡೆಯಲು ಸೌರ ಬೇಲಿ ಹಾಗೂ ರೈಲು ಬ್ಯಾರಿಕೇಡ್‌ಗಳಂತಹ ಕ್ರಮಗಳನ್ನು ಕೈಗೊಳ್ಳಬೇಕು. ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್, ಕಾಲೇಜುಗಳಲ್ಲಿ ಉದ್ಯೋಗಮುಖಿ ಕೌಶಲ್ಯ ಕೋರ್ಸ್, ಸುಳ್ಯದಲ್ಲಿ ಕ್ಯಾರಿಯರ್ ಗೈಡೆನ್ಸ್ ಕೇಂದ್ರ, ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ, ಗ್ರಾಮೀಣ ಆರೋಗ್ಯ ಸೇವೆ ಹಾಗೂ ಕುಡಿಯುವ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.

ಸುಳ್ಯದ ನೈಸರ್ಗಿಕ ಹಾಗೂ ಧಾರ್ಮಿಕ ಪ್ರವಾಸಿ ತಾಣಗಳನ್ನು ಒಳಗೊಂಡ ಪರಿಸರ ಸ್ನೇಹಿ ಇಕೋ-ಟೂರಿಸಂ ಸರ್ಕ್ಯೂಟ್ ಅಭಿವೃದ್ಧಿಪಡಿಸುವಂತೆಯೂ ಅವರು ಆಗ್ರಹಿಸಿದ್ದಾರೆ. ಈ ಎಲ್ಲ ಯೋಜನೆಗಳನ್ನು ಒಗ್ಗೂಡಿಸಿ ‘ಸಮಗ್ರ ಸುಳ್ಯ ಅಭಿವೃದ್ಧಿ ಯೋಜನೆ’ ರೂಪಿಸಿ, ಮುಂದಿನ 3ರಿಂದ 5 ವರ್ಷಗಳಲ್ಲಿ ಹಂತ ಹಂತವಾಗಿ ಅನುಷ್ಠಾನಗೊಳಿಸಲು ಅಗತ್ಯ ಅನುದಾನ ಮತ್ತು ಆಡಳಿತಾತ್ಮಕ ಅನುಮೋದನೆ ನೀಡಬೇಕು ಎಂದು ಕೀರ್ತನ್ ಗೌಡ ಕೊಡಪಾಲ ತಿಳಿಸಿದ್ದಾರೆ.

Edited By :
Kshetra Samachara

Kshetra Samachara

20/09/2026 12:50 pm

Cinque Terre

478

Cinque Terre

0

ಸಂಬಂಧಿತ ಸುದ್ದಿ