ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ : ಜನರ ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಿ: ಸಚಿವ ರಘುಮೂರ್ತಿ

ಚಿತ್ರದುರ್ಗ : ಸರ್ಕಾರದ ಯೋಜನೆಗಳು ಹಾಗೂ ಸೌಲಭ್ಯಗಳು ಜನಸಾಮಾನ್ಯರಿಗೆ ನೇರವಾಗಿ ತಲುಪುವಂತೆ ಅಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಕೇವಲ ಕಾರ್ಯಕ್ರಮಗಳ ಆಯೋಜನೆಗೆ ಸೀಮಿತವಾಗದೆ, ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಆದ್ಯತೆ ನೀಡಬೇಕು ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಸೂಚಿಸಿದರು.

ಹೊಳಲ್ಕೆರೆ ಪಟ್ಟಣದ ಸಂವಿಧಾನ ಸೌಧದ ಶ್ರೀ ಮಹರ್ಷಿ ವಾಲ್ಮೀಕಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಪ್ರಜಾಸೇವಾ ಇಲಾಖೆ ವತಿಯಿಂದ ಆಯೋಜಿಸಿದ್ದ ‘ಪ್ರಜಾಸೇವಾ ಆಂದೋಲನ’ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಮಟ್ಟದಲ್ಲಿ ಪ್ರಜಾಸೇವಾ ಆಂದೋಲನಕ್ಕಾಗಿ ಪ್ರತ್ಯೇಕ ಇಲಾಖೆ ತೆರೆಯಲಾಗಿದ್ದು, ಮುಖ್ಯಮಂತ್ರಿಗಳೇ ಇದರ ಉಸ್ತುವಾರಿ ವಹಿಸಿದ್ದಾರೆ. ಹೋಬಳಿ ಹಾಗೂ ತಾಲೂಕು ಮಟ್ಟದ ಸಭೆಗಳಲ್ಲಿ ಸಾರ್ವಜನಿಕರಿಂದ ಸ್ವೀಕರಿಸುವ ಅರ್ಹ ಬೇಡಿಕೆಗಳು ಮತ್ತು ಸಮಸ್ಯೆಗಳನ್ನು ಸ್ಥಳೀಯವಾಗಿಯೇ ಪರಿಹರಿಸಲು ಸೂಚಿಸಲಾಗಿದೆ. ಸ್ಥಳೀಯವಾಗಿ ಬಗೆಹರಿಯದ ಸಮಸ್ಯೆಗಳನ್ನು ರಾಜ್ಯ ಮಟ್ಟಕ್ಕೆ ತಲುಪಿಸಿ ಪರಿಹಾರ ಕಂಡುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಜನರ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸಬೇಕು. ಸಾರ್ವಜನಿಕರ ಕುಂದುಕೊರತೆಗಳ ನಿವಾರಣೆಗೆ ಮೊದಲ ಆದ್ಯತೆ ನೀಡಬೇಕು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪರಸ್ಪರ ಸಹಕಾರದಿಂದ ಕೆಲಸ ಮಾಡಿದಾಗ ಸರ್ಕಾರದ ಆಶಯ ಈಡೇರಲು ಸಾಧ್ಯ ಎಂದು ಹೇಳಿದರು.

ಕೇಂದ್ರದ ಎನ್‌ಡಿಆರ್‌ಎಫ್ ನಿಯಮಾವಳಿಗಳಂತೆ ಚಳ್ಳಕೆರೆ, ಹಿರಿಯೂರು ಹಾಗೂ ಹೊಸದುರ್ಗ ತಾಲೂಕುಗಳನ್ನು ಈಗಾಗಲೇ ಬರಪೀಡಿತ ಎಂದು ಘೋಷಿಸಲಾಗಿದೆ. ಇದೀಗ ಚಿತ್ರದುರ್ಗ, ಹೊಳಲ್ಕೆರೆ ಹಾಗೂ ಮೊಳಕಾಲ್ಮೂರು ತಾಲೂಕುಗಳೂ ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಲು ಅರ್ಹತೆ ಪಡೆದಿವೆ. ಉಪಗ್ರಹ ಮಾಹಿತಿ, ಮಣ್ಣಿನ ತೇವಾಂಶ, ಬೆಳೆ ನಷ್ಟ ಹಾಗೂ ಕುಡಿಯುವ ನೀರಿನ ಅಭಾವದ ವರದಿಗಳನ್ನು ಆಧರಿಸಿ ಶೀಘ್ರದಲ್ಲೇ ಈ ತಾಲೂಕುಗಳಲ್ಲಿ ಬರ ಘೋಷಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

ನಾಲೆ ಹಾನಿ ಮಾಡಿದರೆ ಕಾನೂನು ಕ್ರಮ

ಚಿತ್ರದುರ್ಗ ಬ್ರಾಂಚ್ ಕೆನಾಲ್‌ಗೆ ಪ್ರಾಯೋಗಿಕವಾಗಿ ಭದ್ರಾ ನೀರು ಹರಿಸಲಾಗುತ್ತಿದೆ. ಕೆಲವೆಡೆ ತಮ್ಮ ಭಾಗದ ಕೆರೆಗಳಿಗೆ ನೀರು ಹರಿಸುವ ಉದ್ದೇಶದಿಂದ ಜನರು ಆತಂಕಗೊಂಡು ನಾಲೆ ಒಡೆದು ನೀರು ಪೋಲು ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಸಾರ್ವಜನಿಕ ಆಸ್ತಿ ಹಾಗೂ ಮೂಲಸೌಕರ್ಯಗಳನ್ನು ಹಾನಿಗೊಳಿಸಿ ನೀರು ಪಡೆಯುವುದು ಕಾನೂನುಬಾಹಿರವಾಗಿದೆ. ಇಂತಹ ಕೃತ್ಯ ಎಸಗುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಟಿ. ರಘುಮೂರ್ತಿ ಎಚ್ಚರಿಸಿದರು.

ಸದ್ಯ 0.60 ಟಿಎಂಸಿ ನೀರು ಹರಿದು ಬಂದಿದ್ದು, ಇನ್ನೂ 2.40 ಟಿಎಂಸಿ ನೀರು ಹರಿಯಲಿದೆ. ಸುಮಾರು ಒಂದು ತಿಂಗಳ ಕಾಲ ನೀರು ಬರಲಿದೆ. ಭದ್ರಾ ಮೇಲ್ದಂಡೆ ಯೋಜನೆಯಡಿ ಒಟ್ಟು 29.90 ಟಿಎಂಸಿ ನೀರನ್ನು ವಿವಿಧ ತಾಲೂಕುಗಳಿಗೆ ಹಂಚಿಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅಚ್ಚುಕಟ್ಟು ಪ್ರದೇಶದ ಎಲ್ಲಾ ಕೆರೆಗಳನ್ನು ತುಂಬಿಸಲಾಗುವುದು. ರೈತರು ಆತಂಕಪಡದೆ ಸಮಾಧಾನದಿಂದ ಇರಬೇಕು ಹಾಗೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು ಎಂದು ಮನವಿ ಮಾಡಿದರು.

ಹೊಳಲ್ಕೆರೆ ತಾಲೂಕನ್ನು ಬರಪೀಡಿತ ಎಂದು ಘೋಷಿಸಲು ಆಗ್ರಹ

ಹೊಳಲ್ಕೆರೆ ಶಾಸಕ ಡಾ. ಎಂ. ಚಂದ್ರಪ್ಪ ಮಾತನಾಡಿ, ಕಳೆದ 100 ವರ್ಷಗಳ ಇತಿಹಾಸದಲ್ಲಿ ಜಿಲ್ಲೆ ಸುಮಾರು 76 ವರ್ಷ ಬರ ಪರಿಸ್ಥಿತಿಯನ್ನು ಎದುರಿಸಿದೆ. ಸದ್ಯ ಹೊಳಲ್ಕೆರೆ ತಾಲೂಕಿನಲ್ಲಿ ಭೀಕರ ಅಭಾವ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ತಾಲೂಕನ್ನು ತಕ್ಷಣ ಬರಪೀಡಿತ ಎಂದು ಘೋಷಿಸಬೇಕು ಎಂದು ಆಗ್ರಹಿಸಿದರು.

ಭದ್ರಾ ಮೇಲ್ದಂಡೆ ಯೋಜನೆಯಡಿ ಜಿಲ್ಲೆಗೆ ಹಂಚಿಕೆಯಾಗಿರುವ 12.5 ಟಿಎಂಸಿ ನೀರಿನಲ್ಲಿ ಕೇವಲ 3 ಟಿಎಂಸಿ ನೀರು ಹರಿಸಲಾಗುತ್ತಿದೆ. ಲಭ್ಯವಿರುವ ನೀರಿಗೆ ಅನುಗುಣವಾಗಿ ಉಳಿದ ನೀರನ್ನು ತಕ್ಷಣ ಹರಿಸಬೇಕು. ಚಿಕ್ಕಂದವಾಡಿ, ಸಾಸಲುಹಳ್ಳಿ ಸೇರಿದಂತೆ ತಾಲೂಕಿನ 11 ಕೆರೆಗಳನ್ನು ಭದ್ರಾ ಯೋಜನೆಯ ವ್ಯಾಪ್ತಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.

ಸಾರ್ವಜನಿಕರು ಸಲ್ಲಿಸಿರುವ ಅರ್ಜಿಗಳು ಹಾಗೂ ಕುಂದುಕೊರತೆಗಳನ್ನು ಅಧಿಕಾರಿಗಳು ಪರಿಶೀಲಿಸಿ, ಒಂದು ವಾರದೊಳಗೆ ಸೂಕ್ತ ಪರಿಹಾರ ಒದಗಿಸಬೇಕು. ಖಾತೆ ಬದಲಾವಣೆ ಹಾಗೂ ನಿವೇಶನಗಳ ಹಕ್ಕುಪತ್ರ ಸಿಗದೆ ಹಲವು ವರ್ಷಗಳಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಪ್ರಜಾಸೇವಾ ಆಂದೋಲನ ಸಭೆ ನಾಮಕಾವಸ್ಥೆಯಾಗದೆ ಬಡವರು ಹಾಗೂ ಸಂಕಷ್ಟದಲ್ಲಿರುವ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸೌಲಭ್ಯಗಳ ವಿತರಣೆ

ಪ್ರಜಾಸೇವಾ ಆಂದೋಲನದ ಅಂಗವಾಗಿ ಸಂವಿಧಾನ ಸೌಧದ ಆವರಣದಲ್ಲಿ ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಅರಣ್ಯ, ಪಟ್ಟಣ ಪಂಚಾಯಿತಿ, ರೇಷ್ಮೆ, ವಿಕಲಚೇತನರು ಹಾಗೂ ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳ ಸೌಲಭ್ಯಗಳ ಮಾಹಿತಿ ನೀಡುವ ಸ್ಟಾಲ್‌ಗಳನ್ನು ತೆರೆಯಲಾಗಿತ್ತು. ಸಚಿವ ಟಿ. ರಘುಮೂರ್ತಿ ಅವರು ಸ್ಟಾಲ್‌ಗಳನ್ನು ಉದ್ಘಾಟಿಸಿ, ವಿಕಲಚೇತನರ ಇಲಾಖೆಯ ಸೌಲಭ್ಯಗಳನ್ನು ಫಲಾನುಭವಿಗಳಿಗೆ ವಿತರಿಸಿದರು. ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕಾರ್ಯಕ್ರಮದಲ್ಲಿ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ. ರಘು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಆರ್. ಶಿವಣ್ಣ ಗಂಜಿಗಟ್ಟೆ, ತಾಲೂಕು ಅಧ್ಯಕ್ಷ ಹುನುಮಂತಪ್ಪ, ಜಿಲ್ಲಾಧಿಕಾರಿ ಎಸ್. ರಮ್ಯ, ಜಿಲ್ಲಾ ಪಂಚಾಯಿತಿ ಸಿಇಒ ಡಾ. ಎಸ್. ಆಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡರು, ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಡಾ. ಕೆ.ಜೆ. ಕಾಂತರಾಜ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

19/09/2026 07:41 pm

Cinque Terre

100

Cinque Terre

0

ಸಂಬಂಧಿತ ಸುದ್ದಿ