ಚಿತ್ರದುರ್ಗ : ಜಯಂತಿಗಳ ಆಚರಣೆಯ ಮುಖ್ಯ ಉದ್ದೇಶ ಸಮಾಜವನ್ನು ಸಂಘಟಿಸುವುದು. ವಿಶ್ವಕರ್ಮ ಸಮುದಾಯವು ಒಂದೆಡೆ ಸೇರಿ ಸಮುದಾಯದ ಏಳಿಗೆ ಹಾಗೂ ಶೈಕ್ಷಣಿಕ, ಆರ್ಥಿಕ ಪ್ರಗತಿಗಾಗಿ ಒಗ್ಗೂಡಿ ಶ್ರಮಿಸಬೇಕು ಎಂದು ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಆರ್. ಶಿವಣ್ಣ ಗಂಜಿಗಟ್ಟಿ ಹೇಳಿದರು.
ನಗರದ ತ.ರಾ.ಸು. ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಾಜದ ಪ್ರತಿಯೊಬ್ಬರೂ ಸರ್ಕಾರದ ಯೋಜನೆಗಳಿಂದ ವಂಚಿತರಾಗಬಾರದು ಎನ್ನುವ ದೃಷ್ಟಿಯಿಂದ ವಿಶ್ವಕರ್ಮ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲಾಗಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ವಿಶ್ವಕರ್ಮ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲು ಚಾಲನೆ ನೀಡಲಾಯಿತು. ನಿಗಮದ ಮೂಲಕ ಶೈಕ್ಷಣಿಕ ಸಾಲ, ಸ್ವಯಂ ಉದ್ಯೋಗ ಯೋಜನೆಗಳು ಹಾಗೂ ಉದ್ಯಮ ಸ್ಥಾಪನೆಗೆ ಧನಸಹಾಯ ನೀಡಲಾಗುತ್ತಿದ್ದು, ಸಮಾಜದ ಬಾಂಧವರು ಇದರ ಸೌಲಭ್ಯ ಪಡೆಯಬೇಕು ಎಂದು ಕರೆ ನೀಡಿದರು.
ವಿಶ್ವಕರ್ಮ ಜಾತಿಗಳಿಗೆ ಹಿಂದುಳಿದ ವರ್ಗಗಳ 2ಎ ಅಡಿಯಲ್ಲಿ ನೀಡಿರುವ ಮೀಸಲಾತಿಯನ್ನು ಸಮಾಜದ ಯುವಕರು ಸದುಪಯೋಗಪಡಿಸಿಕೊಂಡು ಸರ್ಕಾರದಲ್ಲಿ ಉನ್ನತ ಹುದ್ದೆಗಳನ್ನು ಪಡೆಯಬೇಕು ಎಂದರು.
ಶ್ರಮಜೀವಿಗಳ ಕೌಶಲ್ಯಕ್ಕೆ ಜಾಗತಿಕ ಮನ್ನಣೆ:
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ವಿಶ್ವಕರ್ಮ ಸಮುದಾಯದವರ ಕುಶಲತೆ ಮತ್ತು ಕೌಶಲ್ಯ ಕೇವಲ ಚಿನ್ನದ ಆಭರಣ ತಯಾರಿಕೆಗೆ ಸೀಮಿತವಾಗಿಲ್ಲ. ಮರ, ಕಲ್ಲು ಹಾಗೂ ಲೋಹಗಳಿಗೆ ಸೌಂದರ್ಯದ ರೂಪ ನೀಡುವ ಕಲೆ ಈ ಸಮುದಾಯಕ್ಕೆ ಸಿದ್ಧಿಸಿದ್ದು, ಇವರ ಕೌಶಲ್ಯಕ್ಕೆ ಜಾಗತಿಕ ಮಟ್ಟದ ಮನ್ನಣೆ ಇದೆ ಎಂದು ತಿಳಿಸಿದರು.
ವಿಶ್ವಕರ್ಮ ಸಮುದಾಯದ ಕುರಿತು ಸಮಾಜದಲ್ಲಿ ಸೀಮಿತ ಕಲ್ಪನೆ ಇದೆ. ಆದರೆ, ಯಾವುದೇ ಕಚ್ಚಾ ವಸ್ತುವಿಗೆ ಕಲಾತ್ಮಕ ರೂಪ ಕೊಡುವ ಅಪರೂಪದ ಕೌಶಲ್ಯ ಈ ಸಮುದಾಯದಲ್ಲಿದೆ. ಕೇವಲ ನಮ್ಮ ರಾಜ್ಯ ಅಥವಾ ದೇಶ ಮಾತ್ರವಲ್ಲದೆ, ಇಡೀ ಪ್ರಪಂಚದಲ್ಲೇ ಈ ಕುಶಲತೆಗೆ ದೊಡ್ಡ ಬೇಡಿಕೆ ಹಾಗೂ ಗಣ್ಯತೆ ಇದೆ ಎಂದು ಬಣ್ಣಿಸಿದರು.
ಶಿಕ್ಷಣಕ್ಕೆ ಆದ್ಯತೆ ನೀಡಲು ಕರೆ:
ಇತ್ತೀಚಿನ ದಿನಗಳಲ್ಲಿ ಆಧುನಿಕೀಕರಣ ಹೆಚ್ಚಾಗುತ್ತಿದ್ದು, ಸಮುದಾಯದವರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ಎಂದು ತಾಜ್‌ಪೀರ್ ಕರೆ ನೀಡಿದರು. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ವೃತ್ತಿಯಲ್ಲಿ ವೈವಿಧ್ಯತೆ ತಂದರೂ ಸಹ, ಈ ಮೂಲ ಕೌಶಲ್ಯ ಮತ್ತು ವೃತ್ತಿಗೆ ಎಂದಿಗೂ ಆಪತ್ತು ಬರುವುದಿಲ್ಲ. ಪ್ರಪಂಚ ಇರುವವರೆಗೆ ಈ ವೃತ್ತಿಗೆ ಭವಿಷ್ಯವಿದೆ ಎಂದರು.
ಜಯಂತಿ ಅಂಗವಾಗಿ ನಗರದ ಬುರುಜಹಟ್ಟಿಯಲ್ಲಿರುವ ಕೋಟೆ ಆಂಜನೇಯ ದೇವಸ್ಥಾನದ ಬಳಿಯ ಶ್ರೀ ವಿಶ್ವಕರ್ಮ ಕಾಳಿಕಾಂಬ ಕಲ್ಯಾಣ ಮಂಟಪದಿಂದ ತ.ರಾ.ಸು. ರಂಗಮಂದಿರದವರೆಗೆ ವಿಶ್ವಕರ್ಮ ಭಾವಚಿತ್ರದ ಮೆರವಣಿಗೆ ಮಾಡಲಾಯಿತು. ವೇದಿಕೆ ಕಾರ್ಯಕ್ರಮದಲ್ಲಿ ಸಮುದಾಯದ ಸಾಧಕರು ಹಾಗೂ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಹಿರಿಯೂರು ತಾಲ್ಲೂಕು ಹರಿಯಬ್ಬೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಗುರುಮೂರ್ತಿಚಾರಿ ಬಿ. ಅವರು ಉಪನ್ಯಾಸ ನೀಡಿದರು. ಆಯಿತೋಳು ಗ್ರಾಮದ ಜಿ.ಎನ್. ಚಂದ್ರಪ್ಪ ಮತ್ತು ತಂಡದವರು ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ. ಗುರುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗ್ರೇಡ್-2 ತಹಶೀಲ್ದಾರ್ ನಾಗರಾಜ್, ಜಿಲ್ಲಾ ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಕೆ.ಟಿ. ಸುರೇಶಾಚಾರ್ಯ, ವಿಶ್ವಕರ್ಮ ಕಾಳಿಕಾಂಬ ಕಲ್ಯಾಣ ಮಂಟಪ ಟ್ರಸ್ಟ್ ಅಧ್ಯಕ್ಷ ಎಂ. ಶಂಕರಾಚಾರ್ ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
Kshetra Samachara
17/09/2026 07:47 pm