ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ : ಗಂಗಾ ಕಲ್ಯಾಣ ಯೋಜನೆ; 13 ಫಲಾನುಭವಿಗಳಿಗೆ ಮೋಟಾರ್ ಪಂಪ್ ವಿತರಣೆ

ಚಿತ್ರದುರ್ಗ : ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ವತಿಯಿಂದ 2025-26ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಯಡಿ ಶಾಸಕರ ಹಾಗೂ ಸಾಂಸ್ಥಿಕ ಕೋಟಾದಡಿ ಆಯ್ಕೆಯಾದ ಹಿರಿಯೂರು ಮತ್ತು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಒಟ್ಟು 13 ಫಲಾನುಭವಿಗಳಿಗೆ ಶನಿವಾರ ಮೋಟಾರ್ ಪಂಪ್ ಹಾಗೂ ಬಿಡಿಭಾಗಗಳನ್ನು ವಿತರಿಸಲಾಯಿತು.

ನಗರದ ಚಳ್ಳಕೆರೆ ರಸ್ತೆಯ ಶ್ರೀರಾಮ ಕಲ್ಯಾಣ ಮಂಟಪದ ಆವರಣದಲ್ಲಿ ಫಲಾನುಭವಿಗಳಿಗೆ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ, ಗಂಗಾ ಕಲ್ಯಾಣ ಯೋಜನೆಯಡಿ ಹಿರಿಯೂರು ತಾಲೂಕಿನ 8 ಹಾಗೂ ಚಳ್ಳಕೆರೆ ತಾಲೂಕಿನ 5 ಫಲಾನುಭವಿಗಳಿಗೆ ಈಗಾಗಲೇ ಕೊಳವೆಬಾವಿ ಕೊರೆಸಲಾಗಿದ್ದು, ನೀರು ಲಭ್ಯವಾಗಿರುವುದು ಖಚಿತವಾಗಿದೆ. ವಿದ್ಯುತ್ ಸಂಪರ್ಕವೂ ದೊರೆತಿದ್ದು, ರೈತರು ಕೃಷಿ ಚಟುವಟಿಕೆಗಳಿಗೆ ತಕ್ಷಣ ನೀರು ಬಳಸಿಕೊಳ್ಳಲು ಅನುಕೂಲವಾಗುವಂತೆ ಸಾಂಕೇತಿಕವಾಗಿ ಮೋಟಾರ್ ಪಂಪ್ ಹಾಗೂ ಬಿಡಿಭಾಗಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಆದಿ ಜಾಂಬವ ಅಭಿವೃದ್ಧಿ ನಿಗಮದ ವತಿಯಿಂದ 2025-26ನೇ ಸಾಲಿನಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಒಟ್ಟು 122 ಫಲಾನುಭವಿಗಳಿಗೆ ಸೌಲಭ್ಯ ನೀಡುವ ಗುರಿ ಹೊಂದಲಾಗಿದೆ. ಇದರಲ್ಲಿ ಶಾಸಕರ ಕೋಟಾದ 36, ಸಾಂಸ್ಥಿಕ ಕೋಟಾದ 34 ಹಾಗೂ ನಿಗಮದ ಅಧ್ಯಕ್ಷರು ಮತ್ತು ನಿರ್ದೇಶಕರ ಕೋಟಾದ 52 ಫಲಾನುಭವಿಗಳು ಸೇರಿದ್ದಾರೆ ಎಂದು ಸಚಿವರು ತಿಳಿಸಿದರು.

ಇದರ ಜೊತೆಗೆ ನೇರ ಸಾಲ ಯೋಜನೆಯಡಿ 434 ಜನರಿಗೆ, ಉದ್ಯಮಶೀಲತೆ ಅಭಿವೃದ್ಧಿ ಯೋಜನೆಯಡಿ 41 ಜನರಿಗೆ ಹಾಗೂ ಸ್ವಾವಲಂಬಿ ಸಾರಥಿ ಯೋಜನೆಯಡಿ 111 ಜನರಿಗೆ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ್ ಅವರ ನೇತೃತ್ವದಲ್ಲಿ ಚಿತ್ರದುರ್ಗ ಜಿಲ್ಲೆಯ ಆರೂ ತಾಲೂಕುಗಳಿಗೆ ನಿಗಮದ ಯೋಜನೆಗಳು ಹೆಚ್ಚಿನ ಪ್ರಮಾಣದಲ್ಲಿ ತಲುಪುತ್ತಿವೆ. ಸರ್ಕಾರದ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ್, ನಿಗಮದ ಜಿಲ್ಲಾ ವ್ಯವಸ್ಥಾಪಕ ರವಿಕುಮಾರ್ ಸೇರಿದಂತೆ ಫಲಾನುಭವಿಗಳು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

19/09/2026 07:37 pm

Cinque Terre

100

Cinque Terre

0

ಸಂಬಂಧಿತ ಸುದ್ದಿ