ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾರ್ವಜನಿಕ ಹಿತಾಸಕ್ತಿಗೆ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆಯಂತಹ ಆಧುನಿಕ ತಂತ್ರಜ್ಞಾನ ಬಳಕೆಯ ಕೌಶಲ ಅಳವಡಿಕೆ ಅತ್ಯಗತ್ಯ : ಡಾ ರಾಜೇಂದ್ರ ಕೆ.ವಿ

ಬೆಂಗಳೂರು : ಬದಲಾಗುತ್ತಿರುವ ಕಾಲಘಟ್ಟದಲ್ಲಿ ಸಾರ್ವಜನಿಕ ಹಿತಾಸಕ್ತಿಗೆ ಪೂರಕವಾಗಿ ಸೇವೆಗಳನ್ನು ವೇಗವಾಗಿ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕೃತಕ ಬುದ್ಧಿಮತ್ತೆಯಂತಹ ಆಧುನಿಕ ತಂತ್ರಜ್ಞಾನ ಬಳಕೆಯ ಕೌಶಲವನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದು ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತರಾದ ಡಾ. ರಾಜೇಂದ್ರ ಕೆ.ವಿ. ರವರು ಅಭಿಪ್ರಾಯಪಟ್ಟರು.

ಪಾಲಿಕೆಯ ಆಡಳಿತಾತ್ಮಕ ಕಾರ್ಯಗಳನ್ನು ಸರಳೀಕರಿಸುವುದು, ಕಾರ್ಯದಕ್ಷತೆಯನ್ನು ಹೆಚ್ಚಿಸುವುದು, ಕಡತಗಳ ವಿಲೇವಾರಿಯನ್ನು ತ್ವರಿತಗೊಳಿಸುವುದು ಹಾಗೂ ಸಾರ್ವಜನಿಕರಿಗೆ ಉತ್ತಮ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಕೃತಕ ಬುದ್ಧಿಮತ್ತೆ (Artificial Intelligence - AI) ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಕ್ಕೆ ಇಂದು, ಜಲಮಂಡಳಿಯ ಸುವರ್ಣಭವನದಲ್ಲಿ ಪಾಲಿಕೆ ವತಿಯಿಂದ ಆಯೋಜಿಸಿದ ವಿಶೇಷ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಕೃತಕ ಬುದ್ಧಿಮತ್ತೆ ಎಂಬುದು ಈಗ ಐಷಾರಾಮವಲ್ಲ, ಅನಿವಾರ್ಯತೆ ಆಗಿದೆ. ಸರ್ಕಾರಿ ಆಡಳಿತದಲ್ಲಿ ಪತ್ರ ವ್ಯವಹಾರ ಮತ್ತು ಕಡತಗಳ ನಿರ್ವಹಣೆ, ದತ್ತಾಂಶ ವಿಶ್ಲೇಷಣೆ, ಸಾರ್ವಜನಿಕ ಕುಂದುಕೊರತೆಗಳ ವಿಲೇವಾರಿ ಹಾಗೂ ಇತರೆ ಆಡಳಿತಾತ್ಮಕ ಕಾರ್ಯಗಳಲ್ಲಿ AI ತಂತ್ರಜ್ಞಾನದ ಬಳಕೆ ಅತ್ಯಗತ್ಯವಾಗಿದೆ ಎಂದು ಅವರು ತಿಳಿಸಿದರು.

"ಪ್ರತಿ ಐದು ವರ್ಷಕ್ಕೊಮ್ಮೆ ಜನರೇಶನ್ ಬದಲಾಗುತ್ತದೆ. ಕೆಲವು ತಿಂಗಳುಗಳ ಅಂತರದಲ್ಲಿ ಮೊಬೈಲ್ ಆವೃತ್ತಿಗಳಲ್ಲಿ ಬದಲಾವಣೆ ಬರುತ್ತದೆ. ಈ ರೀತಿಯ ಶೀಘ್ರ ಬದಲಾವಣೆಗಳ ಕಾಲಘಟ್ಟದಲ್ಲಿ ಅಧಿಕಾರಿಗಳು ಹಳೆಯ ಕಾಲದ ರೀತಿಯಲ್ಲಿಯೇ ಕೆಲಸ ನಿರ್ವಹಿಸಲು ಸಾಧ್ಯವಿಲ್ಲ. ಆಡಳಿತಾತ್ಮಕವಾಗಿ ಜನರ ಸಮಸ್ಯೆಗಳನ್ನು ನಿವಾರಿಸಲು, ತಮ್ಮ ಕೆಲಸ‌ ಹೊರೆಯನ್ನು ಇಳಿಸಿಕೊಂಡು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಎಐ ಬಳಕೆಯ ಅಳವಡಿಕೆ ಅತ್ಯಂತ ಪ್ರಯೋಜನಕಾರಿ" ಎಂದರು.

ಎಐ ಬಳಕೆಯನ್ನು ಅರ್ಥ ಮಾಡಿಕೊಂಡು, ಬಯಸಿದ ಎಐ ತಂತ್ರಜ್ಞಾನದ ಸುಧಾರಿತ ಆವೃತ್ತಿಯನ್ನು ಬಳಸಿ, ಸಾರ್ವಜನಿಕ ಸಮಸ್ಯೆಗಳನ್ನು ಗುರುತು ಮಾಡಿಕೊಂಡು, ದತ್ತಾಂಶ ಸಂಗ್ರಹಿಸಿ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮುಂದಾಗಬೇಕು ಎಂದು ಆಯುಕ್ತರು ಸೂಚಿಸಿದರು.

ಎಐ ಪ್ರಾಕ್ಟೀಶನರ್, ಡಿ ಎಚ್ ಐ ಬೆಂಗಳೂರು ಸಂಸ್ಥೆಯ ಫೆಸಿಲಿಟೇಟರ್ ಶ್ರೀ ನವೀನ್ ಅತ್ರೇಯರವರು ಎಐ ಕುರಿತ ಪರಿಚಯ ನೀಡಿದರು. ಮೆಶಿನ್ ಲರ್ನಿಂಗ್, ಜನರೇಟಿವ್ ಎಐ, ಎಲ್ ಎಲ್ ಎಂ (ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್) ಇತ್ಯಾದಿ ತಾಂತ್ರಿಕ ವಿಷಯಗಳ ಸ್ಥೂಲ ಪರಿಚಯ ನೀಡಿ, ಆಡಳಿತದಲ್ಲಿ ಎಐ ಬಳಕೆಯ ಅಗತ್ಯ ಮತ್ತು ಪ್ರಯೋಜನದ ಬಗ್ಗೆ ವಿವರಿಸಿದರು.

ಎಐ ಬಳಕೆ ಅಳವಡಿಸಿಕೊಳ್ಳುವ ವಿಧಾನಗಳ ಕುರಿತು ಚರ್ಚಿಸಲಾಯಿತು ಹಾಗೂ ಚಟುವಟಿಕೆಗಳ ಮೂಲಕ ಪ್ರಾಯೋಗಿಕ ಮಾಹಿತಿ ನೀಡಲಾಯಿತು.

ಈ ಸಂದರ್ಭದಲ್ಲಿ ಪಾಲಿಕೆಯ ಅಪರ ಆಯುಕ್ತರು (ಅಭಿವೃದ್ಧಿ) ಶ್ರೀಮತಿ ಕವಿತಾ ರಾಜಾರಾಂ, ಉಪ ಆಯುಕ್ತರು (ಆಡಳಿತ) ಸೈಯದಾ ಆಫ್ರೀನ್ ಬಾನು ಎಸ್. ಬಳ್ಳಾರಿ, ಜಂಟಿ ಆಯುಕ್ತರಾದ ಶ್ರೀ ಸಂಗಪ್ಪ, ವಲಯ ಉಪ‌ ಆಯುಕ್ತರಾದ ಶ್ರೀ ಶಂಕರೆಪ್ಪ ವಣಿಕ್ಯಾಳ, ಶ್ರೀ ಮಂಜುನಾಥ ಸ್ವಾಮಿ, ಡಿ ಎಚ್ ಐ ಬೆಂಗಳೂರು ಸಂಸ್ಥೆಯ ಸ್ಥಾಪಕರಾದ ಶ್ರೀಮತಿ ಕಾವ್ಯಾ ಅನಂತ್ ಮತ್ತು ತಾಂತ್ರಿಕ ತಂಡದವರು, ಪಾಲಿಕೆಯ ಮುಖ್ಯ ಅಭಿಯಂತರರು, ಅಧೀಕ್ಷಕ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

Edited By : PublicNext Desk
Kshetra Samachara

Kshetra Samachara

16/10/2026 07:13 pm

Cinque Terre

692

Cinque Terre

0

ಸಂಬಂಧಿತ ಸುದ್ದಿ