ಮೈಸೂರು: ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಲೆ ಮಾಡಿದ ಆರೋಪದ ಮೇಲೆ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಮೈಸೂರು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ವಿನೋಬ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.
ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ 35 ವರ್ಷದ ರಾಮಪ್ರಸಾದ್ ಕೊಲೆಯಾದ ವ್ಯಕ್ತಿ. ಮೈಸೂರಿನ ಕೆಸರೆಯ ಪವಿತ್ರಾಳನ್ನು ರಾಮಪ್ರಸಾದ್ ಮದುವೆಯಾಗಿದ್ದು, ದಂಪತಿಗೆ 11 ವರ್ಷದ ಗಂಡು ಮಗು ಹಾಗೂ 9 ವರ್ಷದ ಹೆಣ್ಣು ಮಗು ಇದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಪವಿತ್ರಾ ಅದೇ ಗ್ರಾಮದ ಸುನೀಲ್ ಎಂಬಾತನ ಜೊತೆ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಈ ವಿಚಾರವಾಗಿ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಅಕ್ಟೋಬರ್ 16ರಂದು ಕುಡಿದು ಮನೆಗೆ ಬಂದಿದ್ದ ರಾಮಪ್ರಸಾದ್‌ಗೆ ಪವಿತ್ರಾ ಇಡ್ಲಿಯಲ್ಲಿ ದತ್ತೂರಿ ಬೀಜದ ಪುಡಿ ಬೆರೆಸಿ ತಿನ್ನಿಸಿದ್ದಳು ಎನ್ನಲಾಗಿದೆ. ಆದರೂ ಆತ ಮೃತಪಟ್ಟಿರಲಿಲ್ಲ. ಬಳಿಕ ಆತನ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ದತ್ತೂರಿ ಬೀಜದ ಬಗ್ಗೆ ಯೂಟ್ಯೂಬ್‌ನಲ್ಲಿ ಮಾಹಿತಿ ಪಡೆದು ಕೃತ್ಯ ಎಸಗಿರುವ ಶಂಕೆಯೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ರಾಮಪ್ರಸಾದ್ ಮೃತಪಟ್ಟ ಬಳಿಕ ಪವಿತ್ರಾ, ಆತನ ಸಹೋದರ ಚಂದ್ರಹಾಸನಿಗೆ ಕರೆ ಮಾಡಿ, ಮೊಸರು ತಿಂದು ಮಲಗಿದ್ದ ಪತಿ ಎದ್ದೇಳುತ್ತಿಲ್ಲ ಎಂದು ತಿಳಿಸಿದ್ದಳು. ಸ್ಥಳಕ್ಕೆ ಬಂದ ಚಂದ್ರಹಾಸ ಅಣ್ಣನನ್ನು ಆಸ್ಪತ್ರೆಗೆ ಕರೆದೊಯ್ದಿದ್ದರೂ, ಅಷ್ಟರಲ್ಲಾಗಲೇ ರಾಮಪ್ರಸಾದ್ ಮೃತಪಟ್ಟಿದ್ದರು. ಬಳಿಕ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು.
ಆದರೆ, ರಾಮಪ್ರಸಾದ್ ಸಾವಿನ ಬಗ್ಗೆ ಚಂದ್ರಹಾಸನಿಗೆ ಅನುಮಾನ ಮೂಡಿತ್ತು. ಸಾವಿನ ದಿನ ರಾತ್ರಿ ಸುನೀಲ್ ಮನೆಗೆ ಬಂದಿದ್ದ ಎಂಬ ಮಾಹಿತಿ ಸ್ಥಳೀಯರಿಂದ ಲಭ್ಯವಾಗಿತ್ತು ಎನ್ನಲಾಗಿದೆ. ಹೀಗಾಗಿ ಚಂದ್ರಹಾಸ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣದ ತನಿಖೆ ಕೈಗೆತ್ತಿಕೊಂಡ ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆಯ ಹಿಂದಿನ ಸಂಗತಿಗಳು ಬೆಳಕಿಗೆ ಬಂದಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪವಿತ್ರಾ ಹಾಗೂ ಸುನೀಲ್‌ನನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
Kshetra Samachara
23/10/2026 03:19 pm