ಮಂಗಳೂರು: ಮೂತ್ರಪಿಂಡದ ಕಾಯಿಲೆ ಬಡ ಕುಟುಂಬಗಳ ಪಾಲಿಗೆ ಬದುಕನ್ನೇ ಹಿಂಡಿ ಹಿಪ್ಪೆ ಮಾಡುವ ನೋವು. ಜೀವ ಉಳಿಸಿಕೊಳ್ಳಲು ವಾರಕ್ಕೆ ಒಂದೆರಡು ಬಾರಿ ಡಯಾಲಿಸಿಸ್ ಮಾಡಿಸಲೇಬೇಕು. ಒಂದೆಡೆ ಕಾಯಿಲೆಯ ಯಾತನೆ, ಇನ್ನೊಂದೆಡೆ ಹಣದ ಚಿಂತೆ. ಇಂತಹ ಸಂಕಷ್ಟದಲ್ಲಿರುವ ರೋಗಿಗಳ ಪಾಲಿಗೆ ಮಾನವೀಯತೆಯ ಬೆಳಕಾಗಿ ನಿಂತಿರುವುದು ಮಂಗಳೂರಿನ ಬಿ-ಹ್ಯೂಮನ್ ಸಂಸ್ಥೆ. ಈಗಾಗಲೇ ಬಡರೋಗಿಗಳ ಡಯಾಲಿಸಿಸ್‌ಗಾಗಿ ವರ್ಷಕ್ಕೆ ಕೋಟ್ಯಂತರ ಹಣ ವ್ಯಯಿಸುತ್ತಿರುವ ಈ ಸಂಸ್ಥೆಗೆ ನೆರವಿನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದ್ದರಿಂದ ಇನ್ನಷ್ಟು ಬಡರೋಗಿಗಳ ಕಣ್ಣೀರು ಒರೆಸಲು ಇದೀಗ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸುವ ಮೂಲಕ ಹೊಸ ಪ್ರಯತ್ನಕ್ಕೆ ಕೈಹಾಕಿದೆ.
ಬಿ-ಹ್ಯೂಮನ್ ಸಂಸ್ಥೆಯು ಈಗಾಗಲೇ ಜಾತಿ-ಧರ್ಮದ ಭೇದವಿಲ್ಲದೆ 85ಮಂದಿ ಬಡ ಮೂತ್ರಪಿಂಡದ ರೋಗಿಗಳ ಡಯಾಲಿಸಿಸ್ ವೆಚ್ಚ ಭರಿಸುತ್ತಿದೆ. ಒಬ್ಬ ರೋಗಿಗೆ ತಿಂಗಳಿಗೆ ಸರಾಸರಿ 12 ಡಯಾಲಿಸಿಸ್‌ಗಳ ಅಗತ್ಯವಿದ್ದು, ವರ್ಷಕ್ಕೆ 144 ಡಯಾಲಿಸಿಸ್ ಮಾಡಿಸಬೇಕಾಗುತ್ತದೆ. ಇದಕ್ಕಾಗಿ ಒಬ್ಬ ರೋಗಿಗೆ ವರ್ಷಕ್ಕೆ ಸುಮಾರು 1.44ಲಕ್ಷ ರೂ. ಸಂಸ್ಥೆ ವ್ಯಯಿಸುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಒಂದು ಡಯಾಲಿಸಿಸ್‌ಗೆ ಸುಮಾರು 2,500 ರೂ. ವೆಚ್ಚವಾಗುತ್ತಿದ್ದರೂ, ನೆರವಿಗಾಗಿ ಸಂಸ್ಥೆಯನ್ನು ಸಂಪರ್ಕಿಸುವ ಬಡರೋಗಿಗಳಿಗೆ ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆ, ಕಣಚೂರು ಆಸ್ಪತ್ರೆ ಹಾಗೂ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಗಳಲ್ಲಿ ಉಚಿತವಾಗಿ ಡಯಾಲಿಸಿಸ್ ಮಾಡಿಸಿಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ.
ಸದ್ಯ ಡಯಾಲಿಸಿಸ್ ನೆರವಿಗಾಗಿ 60ಕ್ಕೂ ಅಧಿಕ ಬಡರೋಗಿಗಳು ಬಿ-ಹ್ಯೂಮನ್ ಸಂಸ್ಥೆಯ ಕದ ತಟ್ಟಿದ್ದಾರೆ. ಇವರಿಗೂ ನೆರವು ನೀಡುವ ಉದ್ದೇಶದಿಂದ ನವೆಂಬರ್ 22ರಿಂದ 26ರವರೆಗೆ ಹ್ಯುಮ್ಯಾನಿಟಿ ಕಪ್ ಕ್ರಿಕೆಟ್ ಪಂದ್ಯಾಟ ಆಯೋಜಿಸಲು ಸಂಸ್ಥೆ ನಿರ್ಧರಿಸಿದೆ. ಈ ಮೂಲಕ ಕಾರ್ಪೊರೇಟ್ ಸಂಸ್ಥೆಗಳಿಂದ ಪ್ರಾಯೋಜಕತ್ವದ ಮೂಲಕ ಹಣ ಸಂಗ್ರಹಿಸಿ ಈ ಹಣವನ್ನು ಡಯಾಲಿಸಿಸ್ ನೆರವಿಗೆ ಕಾಯುತ್ತಿರುವ ಬಡರೋಗಿಗಳ ಚಿಕಿತ್ಸೆಗೆ ಬಳಸಲು ಉದ್ದೇಶಿಸಲಾಗಿದೆ.
ಮೂತ್ರಪಿಂಡ ವೈಫಲ್ಯದಿಂದ ಬಳಲುವ ರೋಗಿಗಳಿಗೆ ಡಯಾಲಿಸಿಸ್ ಅನಿವಾರ್ಯ. ಚಿಕಿತ್ಸೆ ಸ್ಥಗಿತಗೊಂಡಲ್ಲಿ ಜೀವಕ್ಕೇ ಅಪಾಯವಿದೆ. ಸಂಕಷ್ಟದಲ್ಲಿರುವ ಇಂತಹ ರೋಗಿಗಳ ಪಾಲಿಗೆ ಬಿ-ಹ್ಯೂಮನ್ ಸಂಸ್ಥೆಯ ನೆರವು ಆಶಾಕಿರಣವಾಗಿದೆ. ಈ ಮಾನವೀಯ ಕಾರ್ಯಕ್ಕೆ ಕಾರ್ಪೊರೇಟ್ ಸಂಸ್ಥೆಗಳು, ದಾನಿಗಳು ಹಾಗೂ ಸಾರ್ವಜನಿಕರು ಕೈಜೋಡಿಸಿದರೆ, ಬಡರೋಗಿಗಳ ಡಯಾಲಿಸಿಸ್‌ಗೆ ನಿರಾತಂಕವಾಗಿ ನಡೆಯುತ್ತದೆ.
PublicNext
27/10/2026 03:16 pm