ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಂಗಾವತಿ: ಬಾಬಾ, ಅಧಿಕಾರಿಗಳ ನಡುವೆ ಮಾತಿನ ಚಕಮಕಿ; ಬಾಬಾ ನೇಮಿಸಿದ ಸಿಬ್ಬಂದಿ ಹೊರಕ್ಕೆ

ಗಂಗಾವತಿ: ಗಂಗಾವತಿ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಅಂಜನಾದ್ರಿ ಬೆಟ್ಟದ ದೇವಸ್ಥಾನದ ಆಡಳಿತ ವಿಚಾರ ಮತ್ತೆ ಸಂಘರ್ಷಕ್ಕೆ ಕಾರಣವಾಗಿದ್ದು, ಪ್ರಧಾನ ಅರ್ಚಕ ವಿದ್ಯಾದಾಸ ಬಾಬಾ ಅವರ ವಶದಲ್ಲಿದ್ದ ದೇವಸ್ಥಾನದ ಕಚೇರಿಗಳ ಬೀಗಗಳನ್ನು ಅಧಿಕಾರಿಗಳು ಒಡೆದು, ಜಿಲ್ಲಾಡಳಿತ ದೇವಸ್ಥಾನವನ್ನು ವಶಕ್ಕೆ ಪಡೆಯಲು ಮುಂದಾಗಿದೆ. ಈ ವೇಳೆ ಬಾಬಾ ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.

2018ರ ಅಕ್ಟೋಬರ್‌ಗೂ ಮುನ್ನ ಅಂಜನಾದ್ರಿ ದೇವಸ್ಥಾನವನ್ನು ಟ್ರಸ್ಟ್ ಹಾಗೂ ಪ್ರಧಾನ ಅರ್ಚಕ ವಿದ್ಯಾದಾಸ ಬಾಬಾ ಅವರ ನೇತೃತ್ವದಲ್ಲಿ ನಿರ್ವಹಿಸಲಾಗುತ್ತಿತ್ತು. ಟ್ರಸ್ಟ್ ಮತ್ತು ಬಾಬಾ ನಡುವೆ ಉಂಟಾದ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ 2018ರ ಅಕ್ಟೋಬರ್‌ನಲ್ಲಿ ಜಿಲ್ಲಾಡಳಿತ ದೇವಸ್ಥಾನವನ್ನು ಧಾರ್ಮಿಕ ದತ್ತಿ ಇಲಾಖೆಯ ಅಧೀನಕ್ಕೆ ಪಡೆದುಕೊಂಡಿತ್ತು.

ಈ ಕ್ರಮವನ್ನು ಪ್ರಶ್ನಿಸಿ ವಿದ್ಯಾದಾಸ ಬಾಬಾ ನ್ಯಾಯಾಲಯದ ಮೊರೆ ಹೋಗಿದ್ದರು. 2026ರ ಅಕ್ಟೋಬರ್‌ನಲ್ಲಿ ಧಾರವಾಡ ಹೈಕೋರ್ಟ್, ದೇವಸ್ಥಾನವನ್ನು ಧಾರ್ಮಿಕ ದತ್ತಿ ಇಲಾಖೆಯ ಅಧೀನಕ್ಕೆ ಪಡೆದಿದ್ದ ಆದೇಶವನ್ನು ಕಾನೂನುಬಾಹಿರ ಎಂದು ಪರಿಗಣಿಸಿ, ಸರಕಾರದ ಅಧೀನ ಪಡೆದುಕೊಂಡ ಆದೇಶ ರದ್ದುಗೊಳಿಸಿತ್ತು.

ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಅಕ್ಟೋಬರ್ 8ರಂದು ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿದ್ದ ವಿದ್ಯಾದಾಸ ಬಾಬಾ, ದೇವಸ್ಥಾನದಲ್ಲಿದ್ದ ಧಾರ್ಮಿಕ ದತ್ತಿ ಇಲಾಖೆಯ ಕಚೇರಿಗಳಿಗೆ ಬೀಗ ಹಾಕಿ, ಜಿಲ್ಲಾಡಳಿತ ಸಿಬ್ಬಂದಿಯನ್ನು ಹೊರಕ್ಕೆ ಹಾಕಿ, ದೇವಸ್ಥಾನದ ಆಡಳಿತವನ್ನು ತಮ್ಮ ವಶಕ್ಕೆ ಪಡೆದಿದ್ದರು.

ಇದೀಗ ಜಿಲ್ಲಾಡಳಿತದ ಎಸಿ, ತಹಶೀಲ್ದಾರ್ ಹಾಗೂ ಡಿವೈಎಸ್ಪಿ ನೇತೃತ್ವದ ಅಧಿಕಾರಿಗಳ ತಂಡ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ, ವಿದ್ಯಾದಾಸ ಬಾಬಾ ಕಚೇರಿಗಳಿಗೆ ಹಾಕಿದ್ದ ಬೀಗಗಳನ್ನು ಒಡೆದು ಕಚೇರಿಗಳಿಗೆ ಪ್ರವೇಶಿಸಿದ್ದಾರೆ. ಅಷ್ಟೇ ಅಲ್ಲದೆ ದೇವಸ್ಥಾನದಲ್ಲಿ ಜಿಲ್ಲಾಡಳಿತದಿಂದ ಹುಂಡಿಯನ್ನು ಸಹ ಅಳವಡಿಸಲಾಯಿತು. ಹುಂಡಿ ಅಳವಡಿಸುವ ವೇಳೆ ಅಧಿಕಾರಿಗಳ ಹಾಗೂ ಬಾಬಾ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸ್ ಇಲಾಖೆಯ ಅಧಿಕಾರಿಗಳು ಒತ್ತಾಯ ಮೇರೆಗೆ ಹುಂಡಿ ಅಳವಡಿಸಿದರು. ನಂತರ ದೇವಸ್ಥಾನದಲ್ಲಿ ಬಾಬಾ ನೇಮಕ ಮಾಡಿಕೊಂಡಿದ್ದ ಸಿಬ್ಬಂದಿಯನ್ನು ಹೊರಹಾಕಲಾಯಿತು. ಇನ್ನೂ ಬಾಬಾ ಅವರ ಟ್ರಸ್ಟ್ ಹೆಸರಿನಲ್ಲಿ ದೇವಸ್ಥಾನದ ಆವರಣದಲ್ಲಿ ಹಾಕಲಾಗಿದ್ದ ಬ್ಯಾನರ್‌ಗಳನ್ನು ತೆರವುಗೊಳಿಸಲಾಯಿತು.

ಈ ವೇಳೆ ಅಧಿಕಾರಿಗಳನ್ನು ಪ್ರಶ್ನಿಸಿದ ವಿದ್ಯಾದಾಸ ಬಾಬಾ, ಹೈಕೋರ್ಟ್ ಆದೇಶವಿದ್ದರೂ ಅಧಿಕಾರಿಗಳು ಕಾನೂನು ಉಲ್ಲಂಘಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ನ್ಯಾಯಾಲಯದ ಆದೇಶವನ್ನು ತೋರಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಬಾಬಾ ಅವರಿಗೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಹಾಗೂ ವಾಸ್ತವ್ಯಕ್ಕೆ ಒಂದು ಕೊಠಡಿ ನೀಡಲು ಅವಕಾಶವಿದೆ. ಆದರೆ, ದೇವಸ್ಥಾನದ ಆಡಳಿತವನ್ನು ಸಂಪೂರ್ಣವಾಗಿ ತಮ್ಮ ವಶಕ್ಕೆ ಪಡೆಯಲು ಅವಕಾಶವಿಲ್ಲ. ಹೀಗಾಗಿ ಕಚೇರಿಗಳ ಬೀಗ ತೆರೆಯಲಾಗಿದೆ ಎಂದು ತಿಳಿಸಿದ್ದಾರೆ. ಅಂಜನಾದ್ರಿ ದೇವಸ್ಥಾನದ ಆಡಳಿತದ ಮೇಲಿನ ಹಕ್ಕು ಮತ್ತು ನ್ಯಾಯಾಲಯದ ಆದೇಶದ ಪಾಲನೆ ವಿಚಾರ ಇದೀಗ ಸ್ಥಳದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

Edited By : Vinayak Patil
PublicNext

PublicNext

28/10/2026 10:18 pm

Cinque Terre

10.55 K

Cinque Terre

0

ಸಂಬಂಧಿತ ಸುದ್ದಿ