ಕೊಪ್ಪಳ: ವಿದ್ಯಾರ್ಥಿಗಳು ನಿಮ್ಮ ಪಾಲಕರ ಕನಸು ನನಸು ಮಾಡುವ ನಿಟ್ಟಿನಲ್ಲಿ ಓದಿನ ಕಡೆ ಗಮನ ಕೊಡಬೇಕೆ ಹೊರತು ದೇಶದ ಐಕ್ಯತೆಗೆ ಮಾರಕವಾಗುವ ಹೋರಾಟಗಳ ಕಡೆಗೆ ಗಮನ ಕೊಡಬಾರದು ಎಂದು ಶಾಸಕ ಜನಾರ್ದನ ರೆಡ್ಡಿ ಕಿವಿಮಾತು ಹೇಳಿದರು.
ಕೊಪ್ಪಳದ ಗಂಗಾವತಿ ನಗರದ ಎಸ್ ಕೆಎನ್ ಜಿ ಕಾಲೇಜಿನಲ್ಲಿ ಆಯೋಜಿಸಿದ್ದ ವಿಕಸಿತ್ ಭಾರತ- ಯುವ ಸಂವಾದ ಕಾರ್ಯಕ್ರಮದ ಉದ್ಘಾಟಿಸಿ ಇಂದು ಮಾತನಾಡಿದರು.
ಕೇಂದ್ರ ಸರಕಾರ ಸಂವಿಧಾನದ ನಿಯಮಗಳ ಅಡಿಯಲ್ಲೇ ಎಸ್ಐಆರ್ ಪ್ರಕ್ರಿಯೆ ನಡೆಸುತ್ತಿದೆ. ಜಗತ್ತಿನ ಬಹುದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಯಾವುದೇ ಒಂದು ಪ್ರಕ್ರಿಯೆ ನಡೆದಾಗ ಒಂದಷ್ಟು ಸಣ್ಣ- ಪುಟ್ಟ ದೋಷಗಳು ನಡೆಯುವುದು ಸಹಜ. ಆದರೆ, ಜೆನ್-ಜಿ ಎಂದು ಹೇಳಿಕೊಳ್ಳುವ ಗುಂಪೊಂದು ವಿದೇಶಿ ಫಂಡ್ ಪಡೆದು ದೇಶದ ಐಕ್ಯತೆ ವಿರುದ್ಧವೇ ಹೋರಾಟ ಮಾಡುತ್ತಿದೆ. ಇಂಥ ದೇಶ ವಿರೋಧಿ ಹೋರಾಟಕ್ಕೆ ಈ ದೇಶದ ಪ್ರಧಾನಿ ಆಗುವ ತಿರುಕನ ಕನಸು ಕಾಣುತ್ತಿರುವ ರಾಹುಲ್ ಗಾಂಧಿ ಬೆಂಬಲವಾಗಿ ನಿಂತಿದ್ದಾರೆ. ಇದು ಈ ದೇಶದ ದೊಡ್ಡ ದುರಂತ. ಇಂಥ ದೇಶ ವಿರೋಧಿ ಶಕ್ತಿಗಳ ಸುಳ್ಳು ಪ್ರಚಾರಗಳಿಗೆ ಯುವಕರು ಕಿವಿಯಾಗಬಾರದು ಎಂದರು.
ಕೇಂದ್ರ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವಾಲಯದ ಮೈ- ಭಾರತ್ ಯೂತ್ ಐಕಾನ್ ಸಂಜಯಕುಮಾರ ವೈ ಬಿರಾದಾರ ಎಸ್ಐಆರ್ ಕುರಿತು ಪಿಪಿಟಿ ಮೂಲಕ ಮಾಹಿತಿ ನೀಡಿ, ದೇಶಾದ್ಯಂತ ಎಸ್ಐಆರ್ ಕಾನೂನಾತ್ಮಕವಾಗಿ ಸಂವಿಧಾನದ ಆಶಯಕ್ಕೆ ಅನುಗುಣವಾಗಿಯೇ ನಡೆಯುತ್ತಿದೆ. ಈ ಮೂಲಕ ದೇಶದಲ್ಲಿನ ನಿಜವಾದ ಮತದಾರರನ್ನು ಮಾತ್ರ ಮತದಾರರ ಪಟ್ಟಿಯಲ್ಲಿ ಉಳಿಸಿಕೊಳ್ಳುವುದು ಎಸ್ಐಆರ್ ನ ಪ್ರಮುಖ ಉದ್ದೇಶ.
ಸಂವಿಧಾನದ ಅನುಚ್ಛೇದ 324ರಡಿ ಎಸ್ಐಆರ್ ನಡೆಸಲು ಅವಕಾಶ ಇದೆ. ವಿಶೇಷ ತೀವ್ರ ಪರಿಷ್ಕರಣೆ ಎಂದರೆ ಮತದಾರರ ಪಟ್ಟಿಗಳನ್ನು ಪರಿಶೀಲಿಸಿ ಮತ್ತು ನವೀಕರಿಸುವ ಸಮಗ್ರ ಪ್ರಕ್ರಿಯೆ ಆಗಿದೆ. ಇದನ್ನು ಭಾರತದ ಚುನಾವಣಾ ಆಯೋಗ (ECI) ಕೈಗೊಳ್ಳುತ್ತದೆ. ಬೂತ್ ಮಟ್ಟದ ಅಧಿಕಾರಿಗಳು ಕ್ಷೇತ್ರಮಟ್ಟದ ಪರಿಶೀಲನೆಯನ್ನು ನಡೆಸುತ್ತಾರೆ ಎಂದು ತಿಳಿಸಿದರು.
ಹಳೆಯ, ನಕಲಿ ಮತ್ತು ಅರ್ಹತೆಯಿಲ್ಲದ ದಾಖಲೆ ತೆಗೆದುಹಾಕುವುದು. ಅರ್ಹ ಮತದಾರರು ನೋಂದಾಯಿಸಿ ಕೊಳ್ಳುವುದನ್ನು ಸುಲಭಗೊಳಿಸುವುದು. ಮತದಾರರ ಮಾಹಿತಿಯ ನಿಖರತೆ ಮತ್ತು ಸಮಗ್ರತೆಯನ್ನು ಹೆಚ್ಚಿಸುವುದರ ಜೊತೆಗೆ ಅರ್ಹ ಮತದಾರರ ನೋಂದಣಿಗೆ ಅವಕಾಶ ಕಲ್ಪಿಸುವುದು ಎಸ್ಐಆರ್ ನ ಪ್ರಮುಖ ಉದ್ದೇಶ ಎಂದು ವಿವರಿಸಿದರು.
ಆದರೆ, ಜೆನ್- ಜಿ ಎಂಬ ಹೆಸರಿಟ್ಟುಕೊಂಡಿರುವ ಕೆಲವು ದೇಶ ದ್ರೋಹಿಗಳು ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲು ಎಸ್ಐಆರ್ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ದೇಶದ ಯುವಕರು ಈ ಹೋರಾಟದ ಅಸಲಿ ಮುಖ ತಿಳಿಯಬೇಕು ಎಂದರು.
Kshetra Samachara
03/11/2026 06:19 pm