ಮಂಗಳೂರು: ಗುಣಮಟ್ಟದ ತಾಯಿ ಮತ್ತು ಮಗುವಿನ ಆರೋಗ್ಯ ಸೇವೆಯಲ್ಲಿ ಗಮನಾರ್ಹ ಸಾಧನೆ ಮಾಡಿರುವ ಮಂಗಳೂರಿನ ಸರಕಾರಿ ಲೇಡಿಗೋಷನ್ ಆಸ್ಪತ್ರೆ ರಾಜ್ಯ ಮಟ್ಟದ ಅತ್ಯುತ್ತಮ ಜಿಲ್ಲಾ ಆಸ್ಪತ್ರೆ ಪ್ರಶಸ್ತಿಗೆ ಆಯ್ಕೆಯಾಗಿದೆ. 2025-26ನೇ ಸಾಲಿನಲ್ಲಿ ಕಾನೂನುಬದ್ಧ ಗರ್ಭಪಾತ ಮತ್ತು ಗರ್ಭಪಾತಾನಂತರದ ಆರೈಕೆಯಲ್ಲಿ ಶೇ.100ರಷ್ಟು ತಾಯಿ ಆರೋಗ್ಯ ರಕ್ಷಣೆ ಸಾಧಿಸಿ, ತಾಯಿ ಮರಣ ಪ್ರಮಾಣವನ್ನು ಶೂನ್ಯಕ್ಕೆ ತರುವ ಮೂಲಕ ಆಸ್ಪತ್ರೆ ರಾಜ್ಯದಲ್ಲೇ ಮೊದಲ ಸ್ಥಾನ ಪಡೆದಿದೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಐಪಾಸ್ ಫೌಂಡೇಶನ್ ಸಹಯೋಗದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಈ ಸಾಧನೆ ಗುರುತಿಸಲ್ಪಟ್ಟಿದೆ. ಗರ್ಭಪಾತಾನಂತರದ ತಾಯಿ ಆರೋಗ್ಯ ಕ್ಷೇತ್ರದಲ್ಲಿ ಗುಣಮಟ್ಟದ ಸೇವೆ ಒದಗಿಸುತ್ತಿರುವ ಆಸ್ಪತ್ರೆಯ ಕಾರ್ಯವೈಖರಿಗೆ ರಾಜ್ಯ ಮಟ್ಟದಲ್ಲಿ ಮನ್ನಣೆ ದೊರೆತಿದೆ.
2025-26ನೇ ಸಾಲಿನಲ್ಲಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ಒಟ್ಟು 304 ಕಾನೂನುಬದ್ಧ ಗರ್ಭಪಾತ ಪ್ರಕರಣಗಳನ್ನು ಸಮರ್ಥವಾಗಿ ನಿರ್ವಹಿಸಲಾಗಿದೆ. ಪ್ರತಿಯೊಂದು ಪ್ರಕರಣದಲ್ಲೂ ಸಮಗ್ರ ಗರ್ಭಪಾತ ಆರೈಕೆ (ಕಾಂಪ್ರೆಹೆನ್ಸಿವ್ ಅಬಾರ್ಶನ್ ಕೇರ್) ಕಾರ್ಯಕ್ರಮದ ನಿಯಮಗಳನ್ನು ಪಾಲಿಸಲಾಗಿದ್ದು, ಯಾವುದೇ ತಾಯಿ ಮರಣ ಸಂಭವಿಸಿಲ್ಲ.
2025-26ನೇ ಸಾಲಿನ ಗರ್ಭಪಾತ ಪ್ರಕರಣಗಳ ವಿವರ
9 ವಾರಗಳೊಳಗಿನ ಗರ್ಭಪಾತ: 191
10ರಿಂದ 12 ವಾರಗಳ ಗರ್ಭಪಾತ: 31
12ರಿಂದ 20 ವಾರಗಳ ಗರ್ಭಪಾತ: 52
20ರಿಂದ 24 ವಾರಗಳ ಗರ್ಭಪಾತ: 25
24 ವಾರಗಳ ನಂತರದ ಪ್ರಕರಣಗಳು: 5
ಒಟ್ಟು ಪ್ರಕರಣಗಳು: 304
ಇದರೊಂದಿಗೆ ಶೇ.95ರಷ್ಟು ಫಲಾನುಭವಿಗಳಿಗೆ ಕುಟುಂಬ ಕಲ್ಯಾಣ ವಿಧಾನಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸಿ, ಅವುಗಳ ಅನುಸರಣೆಗೆ ಉತ್ತೇಜನ ನೀಡಿರುವುದು ಆಸ್ಪತ್ರೆಯ ಮತ್ತೊಂದು ಮಹತ್ವದ ಸಾಧನೆಯಾಗಿದೆ.
ಈ ಸಾಧನೆಯ ಕುರಿತು ಮಾತನಾಡಿದ ಸರಕಾರಿ ಲೇಡಿಗೋಷನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್ ಎಂ.ಆರ್., ಯಶಸ್ಸಿಗೆ ಕಾರಣರಾದ ಕೆಎಂಸಿ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ, ಅರಿವಳಿಕೆ ವಿಭಾಗ, ರೇಡಿಯೋಡಯಾಗ್ನೋಸಿಸ್ ವಿಭಾಗ ಹಾಗೂ ನವಜಾತ ಶಿಶು ವಿಭಾಗದ ತಜ್ಞ ವೈದ್ಯರನ್ನು ಅಭಿನಂದಿಸಿದರು.ಶುಶ್ರೂಷಕ ವೃಂದ, ಅರೆವೈದ್ಯಕೀಯ ಸಿಬ್ಬಂದಿ ಹಾಗೂ ತಾಂತ್ರಿಕ ವರ್ಗದವರ ಸೇವೆಯೂ ಈ ಸಾಧನೆಯಲ್ಲಿ ಅನನ್ಯವಾಗಿದೆ ಎಂದು ಅವರು ತಿಳಿಸಿದರು.
Kshetra Samachara
31/10/2026 05:25 pm