ಬೆಳಗಾವಿ : ಹಬ್ಬಕ್ಕೆ ಮಗನ ಆಗಮನದ ನಿರೀಕ್ಷೆಯಲ್ಲಿದ್ದ ಕುಟುಂಬಕ್ಕೆ ಹೆಲಿಕಾಪ್ಟರ್ ದುರಂತ ಬರಸಿಡಿಲಿನಂತೆ ಎರಗಿದೆ. ಉತ್ತರಾಖಂಡದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಬೆಂಗಳೂರು ಸಿಸಿಬಿ ಇನ್‌ಸ್ಪೆಕ್ಟರ್ ಅರುಣ ಸಾಳುಂಕೆ ಮೃತಪಟ್ಟಿದ್ದು, ಅವರ ಸ್ವಗ್ರಾಮ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅರಟಾಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಮಗನನ್ನು ಕಳೆದುಕೊಂಡ ತಂದೆ ಮನೋಹರ ಹಾಗೂ ಸಹೋದರ ಅಮರ ಮಾಧ್ಯಮಗಳ ಮುಂದೆ ದುಃಖ ತೋಡಿಕೊಂಡಿದ್ದಾರೆ. ಅರುಣ ಇಡೀ ಕುಟುಂಬದ ಜವಾಬ್ದಾರಿ ಹೊತ್ತಿದ್ದ. ಊರಿನ ಯುವಕರಿಗೆ ಮಾದರಿಯಾಗಿದ್ದ ಆತ, ಮಗಳನ್ನೂ ಅಪಾರವಾಗಿ ಪ್ರೀತಿಸುತ್ತಿದ್ದ. ದೀಪಾವಳಿ ಹಬ್ಬಕ್ಕೆ ಊರಿಗೆ ಬರುವುದಾಗಿ ಹೇಳಿದ್ದ. ಆದರೆ ಹಬ್ಬದ ವೇಳೆಗೆ ಮಗನ ಮೃತದೇಹ ನೋಡಬೇಕಾದ ಪರಿಸ್ಥಿತಿ ಬಂದಿದೆ ಎಂದು ತಂದೆ ಕಣ್ಣೀರಿಟ್ಟಿದ್ದಾರೆ.
ದಸರಾ ಹಬ್ಬದ ಸಂದರ್ಭದಲ್ಲಿ ಅರುಣ ಅವರ ಪತ್ನಿ ಮತ್ತು ಮಕ್ಕಳು ಅರಟಾಳ ಗ್ರಾಮಕ್ಕೆ ಬಂದಿದ್ದರು. ಕರ್ತವ್ಯದ ಒತ್ತಡದಿಂದ ಅರುಣ ಊರಿಗೆ ಬರಲು ಸಾಧ್ಯವಾಗಿರಲಿಲ್ಲ. ಬಳಿಕ ಸ್ನೇಹಿತರೊಂದಿಗೆ ಕೇದಾರನಾಥ ಮತ್ತು ಬದರಿನಾಥ ಸೇರಿದಂತೆ ಪುಣ್ಯಕ್ಷೇತ್ರಗಳ ಪ್ರವಾಸ ಕೈಗೊಳ್ಳುವುದಾಗಿ ಕುಟುಂಬಕ್ಕೆ ತಿಳಿಸಿದ್ದರು. ಅ.27ರಂದು ಯಾತ್ರೆಗೆ ತೆರಳಿದ್ದ ಅವರು, ಅ.28 ಮತ್ತು 29ರಂದು ವಿಡಿಯೋ ಕಾಲ್ ಮೂಲಕ ಕುಟುಂಬದವರೊಂದಿಗೆ ಮಾತನಾಡಿ ದೇವಾಲಯಗಳ ದರ್ಶನವನ್ನೂ ತೋರಿಸಿದ್ದರು.
ಆದರೆ ಅ.30ರಂದು ಮಧ್ಯಾಹ್ನ ಸುಮಾರು 3.30ಕ್ಕೆ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನಗೊಂಡಿರುವ ಸುದ್ದಿ ಕುಟುಂಬಕ್ಕೆ ತಲುಪಿದೆ. ಕ್ಷಣಾರ್ಧದಲ್ಲಿ ಮನೆಯ ಸಂತೋಷ ದುಃಖವಾಗಿ ಬದಲಾಗಿದೆ.
ಇದೀಗ ಅರುಣ ಅವರ ಪಾರ್ಥಿವ ಶರೀರ ಅಥಣಿ ಪಟ್ಟಣಕ್ಕೆ ತಲುಪಿದ್ದು, ಅಲ್ಲಿಂದ ಹುಟ್ಟೂರಾದ ಅರಟಾಳಕ್ಕೆ ಮೆರವಣಿಗೆಯಲ್ಲಿ ತರಲಾಗುತ್ತಿದೆ. ಅರಟಾಳ ಕ್ರಾಸ್‌ನಲ್ಲಿ ಗ್ರಾಮಸ್ಥರು ಹಾಗೂ ಯುವಕರು ಬೈಕ್ ರ‍್ಯಾಲಿ ಮೂಲಕ ಗೌರವ ಸಲ್ಲಿಸಿ ಪಾರ್ಥಿವ ಶರೀರವನ್ನು ಬರಮಾಡಿಕೊಳ್ಳಲಿದ್ದಾರೆ. ಬಳಿಕ ಅರುಣ ಅವರ ಸ್ವಂತ ಜಮೀನಿನಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮರಾಠಾ ಸಂಪ್ರದಾಯದಂತೆ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.
PublicNext
02/11/2026 09:10 am