ದಾವಣಗೆರೆ: ಉತ್ತರಾಖಂಡದಲ್ಲಿ ಸಂಭವಿಸಿದ ದುರಂತಮಯ ಹೆಲಿಕಾಪ್ಟರ್ ಅಪಘಾತದಲ್ಲಿ ಐವರು ಕನ್ನಡಿಗರು ದುರ್ಮರಣಕ್ಕೀಡಾಗಿದ್ದು, ಮೃತರಲ್ಲೊಬ್ಬರಾದ ಕೆ. ಸುಧೀರ್ ಅವರ ಪಾರ್ಥಿವ ಶರೀರವು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸ್ವಗ್ರಾಮ ತ್ಯಾವಣಗಿಗೆ ಆಗಮಿಸಿದೆ.
ಪಾರ್ಥಿವ ಶರೀರ ಗ್ರಾಮಕ್ಕೆ ತಲುಪುತ್ತಿದ್ದಂತೆ ಕುಟುಂಬಸ್ಥರ ಹಾಗೂ ಆಪ್ತರ ಆಕ್ರಂದನ ಮುಗಿಲು ಮುಟ್ಟಿತು. ಅಂತಿಮ ದರ್ಶನದ ವೇಳೆ ಕುಟುಂಬದವರು ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ದೃಶ್ಯ ನೆರೆದಿದ್ದವರ ಮನ ಕರಗಿಸಿತು. ತ್ಯಾವಣಗಿಯ ಸುಧೀರ್ ಅವರ ನಿವಾಸದ ಬಳಿ ಸಾವಿರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಹಾಗೂ ಸಂಬಂಧಿಕರು ನೆರೆದು ಅಂತಿಮ ನಮನ ಸಲ್ಲಿಸಿದರು.
ನಿವಾಸದ ಬಳಿ ಹಿಂದೂ ಸಂಪ್ರದಾಯದಂತೆ ಮೃತರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಈ ವೇಳೆ ಮಾಜಿ ಶಾಸಕ ಬಸವರಾಜ್ ನಾಯಕ್, ಶ್ರೀನಿವಾಸ ದಾಸಕರಿಯಪ್ಪ ಸೇರಿದಂತೆ ಹಲವು ಪ್ರಮುಖರು ಆಗಮಿಸಿ ಸುಧೀರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಸಾರ್ವಜನಿಕರ ದರ್ಶನದ ನಂತರ, ಕೆಲವೇ ಹೊತ್ತಿನಲ್ಲಿ ಸುಧೀರ್ ಅವರ ಸ್ವಂತ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
PublicNext
02/11/2026 12:26 pm
LOADING...